Connect with us

DAKSHINA KANNADA

ಮಂಗಳೂರು ಪಾಲಿಕೆ ಆಯುಕ್ತರ ಅಕ್ರಮ ಆಸ್ತಿ ಸಂಪಾದನೆ ಆರೋಪ, ಆಯುಕ್ತರ ವಜಾಕ್ಕೆ ಸಿಪಿಐಎಂ ಆಗ್ರಹ

ಮಂಗಳೂರು :  ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಆನಂದ್ ಸಿ.ಎಲ್ ಅವರ ಮೇಲೆ ಶುಕ್ರವಾರ ನಡೆದ ಲೋಕಾಯುಕ್ತ ದಾಳಿ ವೇಳೆ ಅಕ್ರಮ ಸಂಪಾದನೆಯಿಂದ ಗಳಿಸಿದ ಆಸ್ತಿ ಪತ್ತೆಯಾಗಿದೆ. ನಗರದ ಜನರ ತೆರಿಗೆ ಹಣವನ್ನು ಈ ರೀತಿ ಭ್ರಷ್ಟಾಚಾರದ ಮೂಲಕ ಗಳಿಸಲು ಹೊರಟ ಪಾಲಿಕೆ ಆಯುಕ್ತರ ಅಕ್ರಮ ಆಸ್ತಿ ಸಂಪಾದನೆ ಕಂಡು ಸುಮ್ಮನಿದ್ದ ಪಾಲಿಕೆ ಮೇಯರ್ ಮತ್ತು ಬಿಜೆಪಿ ಆಡಳಿತವೇ ನೇರಹೊಣೆ. ಸರಕಾರ ಈ ಕೂಡಲೇ ಪಾಲಿಕೆ ಆಯುಕ್ತರನ್ನು ವಜಾಗೊಳಿಸಬೇಕೆಂದು ಸಿಪಿಐಎಂ(CPIM) ಮಂಗಳೂರು ನಗರ ದಕ್ಷಿಣ ಸಮಿತಿ ಒತ್ತಾಯಿಸಿದೆ.

ಕರ್ನಾಟಕದಲ್ಲಿ ಅತೀ ವೇಗವಾಗ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಬೆಂಗಳೂರು ಬಿಟ್ಟರೆ ಮಂಗಳೂರು ನಗರವೇ ನಂತರದ ಸ್ಥಾನದಲ್ಲಿದೆ. ಈ ನಗರಕ್ಕೆ ಸಾವಿರಾರು ಕೋಟಿಗಳಲ್ಲಿ ಹರಿದು ಬರುತ್ತಿರುವ ಜನರ ತೆರಿಗೆ ರೂಪದ ಹಣಕಾಸು ಅನುದಾನಗಳನ್ನು ನಗರ ಅಭಿವೃದ್ಧಿಗೆ ಬದಲಾಗಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ, ಅಕ್ರಮ ಆಸ್ತಿ ಸಂಪಾದನೆಗೆ ಬಳಸುತ್ತಿರುವ ವಿದ್ಯಾಮಾನಗಳು ಮತ್ತೆ ಮತ್ತೆ ಬೆಳಕಿಗೆ ಬರುತ್ತಿದೆ. ಈಗಾಗಲೇ ರಾಜ್ಯಾದ್ಯಂತ ಎಕಕಾಲಕ್ಕೆ ಹಲವು ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿ ಪತ್ತೆ ಹಚ್ಚಿದ ಅಕ್ರಮ ಆಸ್ತಿ ಬಗ್ಗೆ ಪತ್ರಿಕೆಗಳು ಬೆಳಕು ಚೆಲ್ಲಿದೆ. ಮಂಗಳೂರಿನ ಮಹಾನಗರ ಪಾಲಿಕೆ ಆಯುಕ್ತರಾದ ಆನಂದ ಸಿ.ಎಲ್ ಕೂಡಾ ಅಕ್ರಮ ಆಸ್ತಿ ಸಂಪಾದನೆಯಿಂದ ಗಳಿಸಿದ ಮೌಲ್ಯ ಬಯಲಾಗಿದೆ. ಜನರ ತೆರಿಗೆ ಹಣವಾದ ಇಷ್ಟೊಂದು ಮೊತ್ತವನ್ನು ಭ್ರಷ್ಟಾಚಾರಕ್ಕೆ ಬಳಸುತ್ತಿದ್ದರೂ ಪಾಲಿಕೆ ಆಡಳಿತದಲ್ಲಿರುವ ಬಿಜೆಪಿ ಈವರೆಗೂ ಈ ಬಗ್ಗೆ ತುಟಿ ಬಿಚ್ಚಿಲ್ಲ. ಪ್ರತಿಯೊಂದು ಕಾಮಗಾರಿಗಳಲ್ಲೂ ಹಸ್ತಕ್ಷೇಪ ನಡೆಸುವ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮೈಸೂರಿನ ಮೂಡ ಪ್ರಕರಣದ ಬಗ್ಗೆ ಬೊಬ್ಬಿಡುತ್ತಾರೆಯೇ ಹೊರತು ತನ್ನ ಅಂಗಳದಲ್ಲೇ ನಡೆಯುವ ಹಗರಣದ, ಭ್ರಷ್ಟಾಚಾರದ ಬಗ್ಗೆ ಒಂದು ಮಾತೂ ಆಡಿಲ್ಲ. ಪಾಲಿಕೆ ಆಯುಕ್ತರ ಅಕ್ರಮ ಆಸ್ತಿ ಸಂಪಾದನೆಯಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತರ ಪರೋಕ್ಷ ಬೆಂಬಲಗಳ ಮತ್ತು ನಡವಳಿಕೆ ಬಗ್ಗೆ ಸಾರ್ವಜನಿಕ ವಲಯಗಳಲ್ಲಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮಾತ್ರವಲ್ಲ ಪಾಲಿಕೆ ಆಯುಕ್ತರ ಅಕ್ರಮ ಆಸ್ತಿ ಸಂಪಾದನೆಗೆ ಬಿಜೆಪಿ ಆಡಳಿತವೇ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆಗೆ ಹರಿದು ಬಂದಿರುವ ಸಾವಿರಾರೂ ಕೋಟಿ ಅನುದಾನ ಮೊತ್ತದ ಸ್ಮಾರ್ಟ್ ಸಿಟಿ, ಜಲಸಿರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳಲ್ಲಿ ಎಷ್ಟೆಲ್ಲಾ ಭ್ರಷ್ಟಾಚಾರ ನಡೆದಿರಬಹುದೆಂಬ ಸಂಶಯ ನಗರದ ಜನತೆಯಲ್ಲಿ ವ್ಯಕ್ತವಾಗಿದೆ. ಅಲ್ಲದೇ ಬಹುಮಹಡಿ ಕಟ್ಟಡ ಪರವಾನಿಗೆ, ಕಂಪ್ಲೀಷನ್ ಸರ್ಟಿಫಿಕೇಟ್ ಸೇರಿದಂತೆ ಟಿ.ಡಿ.ಆರ್ ಪ್ರಕರಣಗಳಲ್ಲಿ ಬಹುಕೋಟಿ ಭ್ರಷ್ಟಾಚಾರಗಳು ನಡೆಯುತ್ತಿವೆ ಎಂಬ ಚರ್ಚೆಗಳು ಜನಸಾಮಾನ್ಯರ ನಡುವೆ ಬಲವಾಗಿ ಕೇಳಿ ಬರುತ್ತಿವೆ. ಈವರೆಗೆ ನಡೆದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಮರು ತನಿಖೆಗೆ ಒಳಪಡಿಸಿದರೆ ಇದರ ಹಿಂದಿರುವ ಬಲಾಡ್ಯ ಭ್ರಷ್ಟಾಚಾರಿಗಳನ್ನು ಬಯಲುಗೊಳಿಸಲು ಸಾಧ್ಯವಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ರಾಜ್ಯ ಸರಕಾರ ಈ ಕೂಡಲೇ ಮಂಗಳೂರು ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ, ಜಲಸಿರಿ ಯೋಜನೆ ಸಹಿತ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಮರುತನಿಖೆಗೆ ಒಳಪಡಿಸಿ ಅವುಗಳ ಹಿಂದಿರುವ ಎಲ್ಲಾ ಭ್ರಷ್ಟಾಚಾರಿಗಳನ್ನು ಬಯಲುಗೊಳಿಸಬೇಕು. ಅಕ್ರಮ ಆಸ್ತಿ ಸಂಪಾದನೆಗೆ ಒಳಗಾಗಿರುವ ತಪ್ಪಿತಸ್ಥ ಪಾಲಿಕೆ ಆಯುಕ್ತ ಆನಂದ್ ಸಿ.ಎಲ್ ಅವರನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕು ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *