DAKSHINA KANNADA
ಮಂಗಳೂರು : ಚೆಕ್ ಅಮಾನ್ಯ ಪ್ರಕರಣ, ಆರೋಪಿ ಖುಲಾಸೆಗೊಳಿಸಿ 9ನೇ ಜೆಎಂಎಫ್.ಸಿ ನ್ಯಾಯಾಲಯ ತೀರ್ಪು
ಮಂಗಳೂರು : ಚೆಕ್ ಅಮಾನ್ಯ ಪ್ರಕರಣವೊಂದರಲ್ಲಿ ಮಂಗಳೂರಿನ 9ನೇ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ (ಜೆಎಂಎಫ್.ಸಿ) ನ್ಯಾಯಾಲಯ ಆರೋಪಿ ಖುಲಾಸೆಗೊಳಿಸಿ ತೀರ್ಪು ನೀಡಿದೆ.
ಮಂಗಳೂರಿನ 9ನೇ ಜೆಎಂಎಫ್.ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಡಾ. ಶಿಲ್ಪಾ ಬ್ಯಾಡಗಿ ಅವರು ಈ ತೀರ್ಪು ನೀಡಿದ್ದು, ಆರೋಪಿಯನ್ನು ಚೆಕ್ ಅಮಾನ್ಯ ಪ್ರಕರಣದ ಆರೋಪದಿಂದ ಮುಕ್ತಗೊಳಿಸಲಾಗಿದೆ.ಬೆಳ್ತಂಗಡಿ ಗ್ರಾಮದ ಅರೋಪಿ ಶರತ್ ಜೈನ್ ವಿರುದ್ಧ ಮಂಗಳೂರಿನ ಪ್ರತಿಷ್ಠಿತ ಜಯಾಂಬಿಕ ಚಿಟ್ಸ್ ಪ್ರೈ.ಲಿ. ಕಂಪೆನಿಯು 3 ಲಕ್ಷ ರೂಪಾಯಿಯ ಚೆಕ್ ಅಮಾನ್ಯ ಪ್ರಕರಣ ದಾಖಲಿಸಿತ್ತು. 2016ರಲ್ಲಿ ನಡೆದಿದ್ದ ಚಿಟ್ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ಚೆಕ್ ನ್ನು ಬಳಸಿ ಜಯಾಂಬಿಕಾ ಚಿಟ್ ಕಂಪೆನಿಯು ಆರೋಪಿಯ ವಿರುದ್ಧ ಈ ಪ್ರಕರಣ ದಾಖಲಿಸಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸಂಸ್ಥೆಯಾದ ಜಯಾಂಬಿಕಾ ಚಿಟ್ಸ್ ಕಂಪೆನಿಯು ಚೆಕ್, ಪ್ರಾಮಿಸರಿ ನೋಟ್ ಸಹಿತ 9 ದಾಖಲೆಯನ್ನು ಹಾಜರುಪಡಿಸಿತ್ತು. ಆದರೆ, ನ್ಯಾಯಾಲಯದ ಮುಂದೆ ಹಾಜರಾದ ಆರೋಪಿ ಶರತ್ ಜೈನ್, ತನಗೆ ಯಾವುದೇ ಹಣ ಸಂದಾಯವಾಗಿಲ್ಲ ಎಂದು ವಾದ ಮಾಡಿದ್ದರು.ದೂರುದಾರ ಸಂಸ್ಥೆ ಹಾಜರುಪಡಿಸಿದ ದಾಖಲೆ ಮತ್ತು ಮೌಖಿಕ ಸಾಕ್ಷಿಯನ್ನು ಪರಿಗಣಿಸಿದ ನ್ಯಾಯಾಲಯ ಫಿರ್ಯಾದಿ ಮತ್ತು ಆರೋಪಿ ಪರ ವಕೀಲರ ವಾದ ವಿವಾದವನ್ನು ಆಲಿಸಿದ ಬಳಿಕ ಆರೋಪಿ ಸದ್ರಿ ಪ್ರಕರಣದಲ್ಲಿ ತಪ್ಪಿತಸ್ಥನಲ್ಲ ಎಂದು ತೀರ್ಮಾನಿಸಿ ಚೆಕ್ ಅಮಾನ್ಯ ಪ್ರಕರಣದಿಂದ ಆರೋಪ ಮುಕ್ತಗೊಳಿಸಿ ತೀರ್ಪು ನೀಡಿತು.ಆರೋಪಿ ಪರವಾಗಿ ವಕೀಲರಾದ ಸುಕೇಶ್ ಕುಮಾರ್ ಶೆಟ್ಟಿ ಮತ್ತು ಕೆ. ಶ್ರೀಪತಿ ಪ್ರಭು ಅವರು ವಾದ ಮಂಡಿಸಿದ್ದರು.