Connect with us

LATEST NEWS

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ – ಕುಖ್ಯಾತ ಅಂತರಾಜ್ಯ ಕ್ರಿಮಿನಲ್ ಗಳು ಅರೆಸ್ಟ್

ಮಂಗಳೂರು ಮಾರ್ಚ್ 13: ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ 3 ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತು ಹಾಗೂ ಅಕ್ರಮ ಪಿಸ್ತೂಲ್ ಸಾಗಾಟ/ಮಾರಾಟಕ್ಕೆ ಸಂಬಂಧಪಟ್ಟಂತೆ ಕೇರಳ- ಕರ್ನಾಟಕ ರಾಜ್ಯಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ 5 ಮಂದಿ ಕುಖ್ಯಾತ ಅಂತಾರಾಜ್ಯ ಕ್ರಿಮಿನಲ್ ಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 3 ಪಿಸ್ತೂಲ್ ಗಳು. 6 ಸಜೀವ ಮದ್ದುಗುಂಡುಗಳು ಹಾಗೂ 12.895 ಕೆಜಿ ಗಾಂಜಾ, 3 ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ.


ಪ್ರಕರಣ 1 ರಲ್ಲಿ ಮಂಗಳೂರು ನಗರದ ನಾಟೆಕಲ್ ಪರಿಸರದಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಕಾರಿನಲ್ಲಿದ್ದ ಕಾಸರಗೋಡಿನ ನಿವಾಸಿಗಳಾದ ನೌಫಲ್ (38), ಮನ್ಸೂರ್(36) ಎಂಬವರನ್ನು ಅರೆಸ್ಟ್ ಮಾಡಿದ್ದಾರೆ. ಅವರಿಂದ 2 ಪಿಸ್ತೂಲ್ ಗಳು, 4 ಸಜೀವ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ನೌಫಲ್ ಎಂಬಾತನ ವಿರುದ್ಧ ಈ ಹಿಂದೆ ಕೇರಳ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸಾಗಾಟ/ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ಮನ್ನೂರ್ ಎಂಬಾತನ ವಿರುದ್ಧ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣ-2
ಕೇರಳದಿಂದ ಮಂಗಳೂರಿಗೆ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ನಗರದ ಆರ್ಕುಳದಲ್ಲಿ ಕಾರನ್ನು ಪತ್ತೆ ಹಚ್ಚಿ ಕಾರಿನಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಆರೋಪಿ ಕಾಸರಗೋಡಿನ ಅಬ್ದುಲ್ ಲತೀಫ್ © ತೋಕು ಲತೀಪ್ (29) ಎಂಬಾತನನ್ನು ಅರೆಸ್ಟ್ ಮಾಡಿ ಆತನಿಂದ 12.895 ಕೆಜಿ ಗಾಂಜಾ, ಮೊಬೈಲ್ ಫೋನ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ಆರೋಪಿ ಅಬ್ದುಲ್ ಲತೀಫ್ @ ತೋಕ್ ಲತೀಫ್ ಎಂಬಾತನು ಇತ್ತೀಚೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗೆ ಪಿಸ್ತೂಲ್ ನ್ನು ನೀಡಿದ ಆರೋಪಿಯಾಗಿರುತ್ತಾನೆ. ಅಲ್ಲದೇ 2024 ನೇ ಇಸವಿಯಲ್ಲಿ ಉಳ್ಳಾಲದಲ್ಲಿ ದಾಖಲಾದ ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪಿ ಅಸ್ಲರ್ ಎಂಬಾತನಿಗೂ ಕೂಡಾ ಈತನು ಪಿಸ್ತೂಲ್ ನ್ನು ಮಾರಾಟ ಮಾಡಿದ್ದು, ಈ ಪ್ರಕರಣಗಳಲ್ಲಿ ಈತನು ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಈ ಹಿಂದೆ ಕೇರಳ ಹಾಗೂ ಕರ್ನಾಟಕ ರಾಜ್ಯದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ, ಹಲ್ಲೆ, ದರೋಡೆ, ಕೊಲೆಯತ್ನ, ಕೊಲೆ ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳು ದಾಖಲಾಗಿರುತ್ತದೆ.

ಪ್ರಕರಣ-3

ಕೇರಳ ಹಾಗೂ ಕರ್ನಾಟಕದ ಗಡಿಭಾಗ ತಲಪಾಡಿಯಲ್ಲಿ ಮಹಾರಾಷ್ಟ್ರದ ನೊಂದಣಿ ಕಾರಿನಲ್ಲಿ ಯಾವುದೋ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ತಲಪಾಡಿ ದೇವಿಪುರದ ಬಳಿ ದಾಳಿ ನಡೆಸಿ ಕಾರಿನಲ್ಲಿದ್ದ ಕಾಸರಗೋಡಿನ ಮೊಹಮ್ಮದ್ ಅಸ್ಲರ್(27), ಮೊಹಮ್ಮದ್ ಸಾಲಿ(31) ಎಂಬ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತರಿಂದ ಪಿಸ್ತೂಲ್-1. ಸಜೀವ ಮದ್ದುಗುಂಡುಗಳು-2, ಮೊಬೈಲ್ ಫೋನುಗಳು-2 ಹಾಗೂ MH-02-BT-2287 ನೇ ವೋಕ್ಸ್ ವ್ಯಾಗನ್ ಪೋಲೋ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ ರೂ. 10,20,000/- ಆಗಬಹುದು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಗಳ ಪೈಕಿ ಮೊಹಮ್ಮದ್ ಅಸ್ಲರ್ ಎಂಬಾತನ ವಿರುದ್ಧ ಹಲ್ಲೆ, ದರೋಡೆ, ಕೊಲೆಯತ್ನ ಹಾಗೂ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಕೇರಳ ಹಾಗೂ ಕರ್ನಾಟಕ ರಾಜ್ಯದಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿರುತ್ತದೆ.
ಇನ್ನೋರ್ವ ಆರೋಪಿ ಮೊಹಮ್ಮದ್ ಸಾಲಿ ಎಂಬಾತನ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ, ಹಲ್ಲೆ, ಕೊಲೆ ಯತ್ನ, ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಪಟ್ಟಂತೆ ಒಟ್ಟು 10 ಪ್ರಕರಣಗಳು ದಾಖಲಾಗಿರುತ್ತದೆ.
ಮೇಲ್ಕಂಡ 3 ಪ್ರಕರಣಗಳಲ್ಲಿ ಒಟ್ಟು 3 ಪಿಸ್ತೂಲ್ ಗಳು, ಸಜೀವ ಮದ್ದುಗುಂಡುಗಳು-6, 12.895 ಕೆಜಿ ಗಾಂಜಾ, 5 ಮೊಬೈಲ್ ಫೋನುಗಳು ಹಾಗೂ 3 ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 40,50,000/-ಆಗಬಹುದು. ಈ ಪ್ರಕರಣಗಳಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *