ಕಡಬ ಜುಲೈ 31: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನೆಲ್ಯಾಡಿಯಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ಬಹುತೇಕ ಅಂತಿಮ ಹಂತ ತಲುಪಿದೆ. ಆದರೆ ಕಾಮಗಾರಿಯ ಅವೈಜ್ಞಾನಿಕ ನಿರ್ವಹಣೆ ಮತ್ತು ಸಾರ್ವಜನಿಕರ ಅಗತ್ಯ ಬೇಡಿಕೆ ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿರುವ ಇಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣವೇ ಡಿವೈಡರ್ ಮತ್ತು ಯೂ ಟರ್ನ್ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರಲ್ಲಿರುವ ಪ್ರಮುಖ ಪೇಟೆಗಳಲ್ಲಿ ನೆಲ್ಯಾಡಿ ಪೇಟೆಯೂ ಒಂದಾಗಿದೆ. ಹೆಚ್ಚಿನ ಸಂಖ್ಯೆಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಈ ಪೇಟೆಯ ಮಧ್ಯೆ ಸಾಗುವ ಹೆದ್ದಾರಿಗೆ ನೆಲ್ಯಾಡಿ ಜಂಕ್ಷನ್ನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಅಗತ್ಯವಿರುವ ಸಂಪರ್ಕ ರಸ್ತೆ ಅಥವಾ ಡಿವೈಡರ್ ಕಲ್ಪಿಸಿಲ್ಲ. ರಸ್ತೆ ದಾಟಬೇಕಾದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸುಮಾರು ಎರಡೂವರೆ ಕಿ.ಮೀ ಸುತ್ತು ಬಳಸಿ ತೆರಳುವಂತಾಗಿದೆ. ತುರ್ತು ಸಂದರ್ಭಗಳಲ್ಲಿ ಅಂಬುಲೆನ್ಸ್ ಸೇವೆಗೂ ಅಡಚಣೆಯಾಗಿ ಪರಿಣಮಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಭಾಗದ ಪೈಚಾರು, ಅಲೆಟ್ಟಿ, ಮಾದೇರಿ, ಕೊಳ್ಕೊಟ್ಟು, ಮೊರಂಕಾಲ, ಪಡ್ಡಡ್ಕ ಮೊದಲಾದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಸರ್ವಿಸ್ ರಸ್ತೆಗಳಿಗೂ ಸಮರ್ಪಕ ಸಂಪರ್ಕ ರಸ್ತೆ ನಿರ್ಮಿಸಿಲ್ಲ. ರಸ್ತೆ ಅಭಿವೃದ್ಧಿಯ ಹೆಸರಿನಲ್ಲಿ ಜನರ ದೈನಂದಿನ ಬದುಕಿಗೆ ತೊಂದರೆ ಆಗಿದೆ ಅನ್ನೋದು ಸ್ಥಳೀಯರ ಆರೋಪವಾಗಿದೆ.

ನೆಲ್ಯಾಡಿ ಪೇಟೆಯಲ್ಲಿ ಸರ್ವೀಸ್ ರಸ್ತೆಯನ್ನು ಈಗಾಗಲೇ ನಿರ್ಮಿಸಲಾಗಿದ್ದು, ಬೇರೆ ಕಡೆಗಳಲ್ಲಿ ನಿರ್ಮಾಣವಾಗಿರುವ ಸರ್ವೀಸ್ ರಸ್ತೆಗಿಂತ ಕಡಿಮೆ ಅಂತರವನ್ನು ಹೊಂದಿದ್ದು, 5.5 ಮೀಟರ್ ಇರಬೇಕಿದ್ದ ರಸ್ತೆಯ ಅಗಲ ಇಲ್ಲಿ ಕೇವಲ 4.5 ಅಗಲವಿದೆ. ಅಲ್ಲದೆ ಸರ್ವೀಸ್ ರಸ್ತೆಯಲ್ಲೇ ವಾಹನ ಪಾರ್ಕಿಂಗ್ ಮಾಡುವ ಕಾರಣ ನೆಲ್ಯಾಡಿ ಪೇಟೆ ಕಿಷ್ಕಿಂದೆಯಾಗಿ ಬದಲಾಗಿದೆ. ಪೇಟೆಯ ಈ ಸಮಸ್ಯೆಗಳನ್ನು ಹತ್ತು ದಿನಗಳ ಒಳಗೆ ಸ್ಥಳ ಪರಿಶೀಲನೆ ನಡೆಸಿ ಸಂಪರ್ಕ ರಸ್ತೆಗಳು, ಅಗತ್ಯ ಡಿವೈಡರ್ ಹಾಗೂ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸುವ ಕುರಿತು ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು ಎನ್ನುವ ಒತ್ತಾಯವೂ ಕೇಳಿಬಂದಿದೆ. ನೆಲ್ಯಾಡಿ ಪೇಟೆಗೆ ಸಂಪರ್ಕ ಕಲ್ಪಿಸಲು ಸ್ಥಳೀಯರು ಪರದಾಡುವಂತಹ ಸ್ಥಿತಿಯೂ ನಿರ್ಮಾಣವಾಗಿದೆ. ತಕ್ಷಣವೇ ಈ ಸಮಸ್ಯೆ ಬಗೆಹರಿಸದೇ ಹೋದಲ್ಲಿ ಹೋರಾಟದ ಎಚ್ಚರಿಕೆಯನ್ನು ನೀಡಿದ್ದಾರೆ.