LATEST NEWS
ಬ್ಯಾಂಕ್ ಖಾತೆ ಕೆವೈಸಿ ಅಪ್ಡೇಟ್ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಗೆ ಕನ್ನ
ಮಂಗಳೂರು ಜೂನ್ 16: ಬ್ಯಾಂಕ್ ಖಾತೆ ಕೆವೈಸಿ ಅಪ್ಡೇಟ್ ಗೆ ಸಂಬಂಧಿಸಿದ ಲಿಂಕ್ ಕಳುಹಿಸಿ ಬ್ಯಾಂಕ್ ಖಾತೆಯಿಂದ ಹಣ ಲಪಾಟಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ರಾಷ್ಟ್ರೀಕೃತ ಬ್ಯಾಂಕ್ ಒಂದರ ವೆಬ್ ಸೈಟ್ ಲಿಂಕ್ ತರಹ ಕಾಣಿಸುವ ಈ ಲಿಂಕ್ ಮಂಗಳೂರು ನಗರದಲ್ಲಿ ಹಲವಾರು ಜನರ ಮೊಬೈಲ್ ಗೆ ಬಂದಿದೆ. ಈ ಸಂದೇಶಗಳನ್ನು ನಂಬಿದ ಗ್ರಾಹಕರು ಒಟಿಪಿ ಸಂಖ್ಯೆಗಳನ್ನು ನೀಡಿದ್ದಾರೆ. ನಗರದ ಗ್ರಾಹಕರೊಬ್ಬರು 63,000 ರೂ. ಗಳನ್ನು ಕಳೆದುಕೊಂಡರೆ, ಇನ್ನೂ ಹಲವರು ಬೇರೆ ಬೇರೆ ಮೊತ್ತವನ್ನು ಕಳೆದುಕೊಂಡಿದ್ದಾರೆ.
ಲಿಂಕ್ ಒತ್ತಿದ ತಕ್ಷಣ, ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಅನ್ನು ಹೋಲುವ ಒಂದು ಸೈಟ್ ತೆರೆಯುತ್ತದೆ. ಮಾಹಿತಿಯನ್ನು ಭರ್ತಿ ಮಾಡಲು ಗ್ರಾಹಕರಿಗೆ ಸೂಚನೆ ನೀಡಲಾಗಿದೆ. ಈ ವಿವರಗಳ ಆಧಾರದ ಮೇಲೆ, ವಂಚಕರು ಸೈಟ್‌ನಲ್ಲಿನ ಗ್ರಾಹಕರ ಖಾತೆಗಳನ್ನು ತೆರೆಯುತ್ತಾರೆ, ನಂತರ ಖಾತೆಗಳಿಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಗೆ ಒಟಿಪಿ ರವಾನೆಯಾಗುತ್ತದೆ. ನಂತರ ಕರೆ ಮಾಡಿ ಒಟಿಪಿ ಪಡೆದು ಹಣ ದೋಚುತ್ತಾರೆ.
ಒಂದಷ್ಟು ಗ್ರಾಹಕರು ಅನುಮಾನಗೊಂಡು ಬ್ಯಾಂಕ್ ಶಾಖೆಗಳನ್ನು ಕರೆ ಮಾಡಿದಾಗ ವಂಚನೆ ವಿಚಾರ ಬಹಿರಂಗವಾಗಿದೆ. ಬ್ಯಾಂಕ್ ಅಧಿಕಾರಿಗಳು ತಕ್ಷಣವೇ ಗ್ರಾಹಕರಿಗೆ ತಕ್ಷಣವೇ ನೆಟ್ ಬ್ಯಾಂಕಿಂಗ್ ಪಾಸ್ ವರ್ಡ್ ಬದಲಾಯಿಸಲು ಸೂಚಿಸಿದ್ದಾರೆ. ತತ್ ಕ್ಷಣಕ್ಕೆ ಖಾತೆಯನ್ನು ಬ್ಲಾಕ್ ಮಾಡುವುದಾಗಿ ಹಾಗೂ ಮುಂದೆ ಬ್ಯಾಂಕ್‌ಗೆ ಖುದ್ದಾಗಿ ಭೇಟಿ ನೀಡಿ ನಿರ್ಬಂಧಿಸಿದ ಖಾತೆಯನ್ನು ತೆರವು ಮಾಡುವಂತೆ ಸಲಹೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ