LATEST NEWS
ಕೊನೆಗೂ ಸಂಚಾರ ಆರಂಭಿಸಿದ ಮಂಗಳೂರು ಬೆಂಗಳೂರು ರೈಲು

ಕೊನೆಗೂ ಸಂಚಾರ ಆರಂಭಿಸಿದ ಮಂಗಳೂರು ಬೆಂಗಳೂರು ರೈಲು
ಮಂಗಳೂರು ಅಕ್ಟೋಬರ್ 10: ಈ ಬಾರಿಯ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಂಪೂರ್ಣ ಬಂದ್ ಆಗಿದ್ದ ಮಂಗಳೂರು – ಬೆಂಗಳೂರು ರೈಲು ಓಡಾಟ ಈಗ ಮತ್ತೆ ಆರಂಭವಾಗಲಿದೆ. ಎರಡು ತಿಂಗಳ ಬಳಿಕ ಸಕಲೇಶಪುರ ಘಾಟಿ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ರೈಲು ಇಂದು ಪುನಾರಂಭಗೊಳ್ಳಲಿದೆ.
ಸಕಲೇಶಪುರ ಘಾಟಿ ಪ್ರದೇಶದಲ್ಲಿ ಭೂ ಕುಸಿತದಿಂದಾಗಿ ಮಂಗಳೂರಿನಿಂದ ಬೆಂಗಳೂರು ಸಂಪರ್ಕಿಸುವ ಒಂದು ಬೆಂಗಳೂರು- ಕಾರವಾರ/ಕಣ್ಣೂರು ಮತ್ತು ವಾರದಲ್ಲಿ ಮೂರು ದಿನ ಸಂಚರಿಸುವ ಎರಡು ಯಶವಂತಪುರ- ಮಂಗಳೂರು ಜಂಕ್ಷನ್ ಮತ್ತು ಯಶವಂತಪುರ-ಕಾರವಾರ ರೈಲುಗಳು ರದ್ದುಗೊಂಡಿದ್ದವು.

ರೈಲ್ವೆ ಹಳಿಯಲ್ಲಿ ಭೂಕುಸಿತ ಸಂಭವಿಸಿದ 65 ಕಡೆಗಳಲ್ಲಿ 2ಲಕ್ಷ ಕ್ಯುಬಿಕ್ ಮೀಟರ್‌ನಷ್ಟು ಮಣ್ಣು ಮತ್ತು ಕಲ್ಲು ರೈಲ್ವೆ ಹಳಿ ಮೇಲೆ ಬಿದ್ದಿದ್ದು, ಇಲಾಖೆಯ ತಾಂತ್ರಿಕ ವಿಭಾಗ ಸಮರೋಪಾದಿಯಲ್ಲಿ ಕಾಮಗಾರಿ ಮುಗಿಸಿತ್ತು.
ಈ ಹಿನ್ನಲೆಯಲ್ಲಿ ರೈಲು ಓಡಾಟ ಆರಂಭಗೊಳ್ಳಲಿದ್ದು, ಇಂದು ಬೆಂಗಳೂರು-ಕಾರವಾರ/ಕಣ್ಣೂರು-ಬೆಂಗಳೂರು ರಾತ್ರಿ ರೈಲು ಆರಂಭಗೊಳ್ಳಲಿದೆ.
ಹಗಲು ರೈಲು ನಾಳೆ ಸಂಚಾರ ಶುರು ಮಾಡಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಕಾರವಾರದಿಂದ ಬೆಂಗಳೂರಿಗೆ ತೆರಳುವ ರೈಲು, ಬೋಗಿಗಳ ಕೊರತೆಯಿಂದ ಶನಿವಾರ ಕಾರವಾರದಿಂದ ಸಂಚಾರ ಆರಂಭಿಸಲಿದೆ. ಉಳಿದ ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಇಲಾಖೆ ಮೂಲ ತಿಳಿಸಿದೆ.
ದುರಸ್ತಿ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಾಯೋಗಿಕ ಓಡಾಟದ ಬಳಿಕ ಕಳೆದ ತಿಂಗಳಿನಿಂದ ಈ ಮಾರ್ಗದಲ್ಲಿ ಗೂಡ್ಸ್ ರೈಲು ಸಂಚಾರ ಆರಂಭಿಸಲಾಗಿತ್ತು. ಗೂಡ್ಸ್ ರೈಲು ಸಂಚಾರ ಯಶಸ್ವಿಯಾಗಿ ಮುಂದುವರಿಯುತ್ತಿರುವುದು ಮತ್ತು ಹೊಸ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸದೆ ಇರುವುದರಿಂದ ಈ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಓಡಾಟಕ್ಕೆ ಅವಕಾಶ ಒದಗಿಸಲಾಗಿದೆ.