DAKSHINA KANNADA
ಮಂಗಳೂರು: ಪಬ್ ನಲ್ಲಿ ಕಾಲೇಜು ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗದಳ ತಡೆ; ಮೋಜು-ಮಸ್ತಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಎಚ್ಚರಿಕೆ !
ಮಂಗಳೂರು, ಜುಲೈ 26: ಪಬ್‌ನಲ್ಲಿ ಕಾಲೇಜು ವಿದ್ಯಾರ್ಥಿಗಳು ನಡೆಸ್ತಾ ಇದ್ದ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರು ತಡೆಯೊಡ್ಡಿದ್ದು, ಪಾರ್ಟಿಯಲ್ಲಿ ತೊಡಗಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪಬ್‌ನಿಂದ ಹೊರಗೆ ಕಳುಹಿಸಿದ ಘಟನೆ ಮಂಗಳೂರಿನ ಬಲ್ಮಠ ಬಳಿ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ಲಿಪ್ ಲಾಕ್ ವಿಡಿಯೋ ಮೂಲಕ ಕಾಲೇಜಿನ ವಿದ್ಯಾರ್ಥಿಗಳು ಸುದ್ದಿಯಾಗಿದ್ದರು. ಮಂಗಳೂರಿನ ರಿ-ಸೈಕಲ್ ದಿ ಲಾಂಜ್ ಪಬ್ ನಲ್ಲಿ ನಡೆಯುತ್ತಿದ್ದ ಪಾರ್ಟಿಗೆ ಬಜರಂಗದಳದ ಕಾರ್ಯಕರ್ತರು ನುಗ್ಗಿ ಅಡ್ಡಿ ಪಡಿಸಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ ನಡೆಯುತಿದ್ದು, ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್ ನಲ್ಲಿ ಕುಡಿದು ಯುವಕ-ಯುವತಿಯರಿಂದ ಮೋಜು ಮಸ್ತಿಯಲ್ಲಿ ತೊಡಗಿದ್ದುರು ಎಂಬ ಆರೋಪವಿದೆ.
ಪದವಿ ವಿದ್ಯಾರ್ಥಿಗಳಿಂದ ಪಬ್ ನಲ್ಲಿ ಮೋಜು ಮಸ್ತಿ ನಡೆಯುತ್ತಿದೆ ಎನ್ನುವ ಮಾಹಿತಿಯಿಂದ ಪಬ್ ಒಳ ಹೊಕ್ಕ ಬಜರಂಗದಳದ ಕಾರ್ಯಕರ್ತರು, ಪಾರ್ಟಿ ನಿಲ್ಲಿಸುವಂತೆ ಸೂಚಿಸಿ ಬೈದು ವಿದ್ಯಾರ್ಥಿಗಳನ್ನ ಹೊರ ಕಳುಹಿಸಿದ್ದಾರೆ. ಬಳಿಕ ಮಧ್ಯ ಪ್ರವೇಶಿಸಿ ಬಜರಂಗದಳದ ಕಾರ್ಯಕರ್ತರನ್ನ ಪೊಲೀಸರು ಚದುರಿಸಿದ್ದು, ಪಾರ್ಟಿಯನ್ನು ಅರ್ಧದಲ್ಲೇ ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಕಾಲ್ಕಿತ್ತಿದ್ದಾರೆ. ತುಂಡುಡುಗೆ ತೊಟ್ಟು ಕುಡಿದು ಮೋಜು ಮಸ್ತಿ ಮಾಡಿದದ್ದಾರೆಂದು ವಿದ್ಯಾರ್ಥಿಗಳ ಮೇಲೆ ಆರೋಪವಿದೆ. ಸುಮಾರು 30-40 ಬಜರಂಗದಳದ ಕಾರ್ಯಕರ್ತರು ಅಡ್ಡಿ ಪಡಿಸಿದ್ದಾರೆ.
ದೇಶ-ವಿದೇಶದ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವ ಮಂಗಳೂರಿಗೆ ಎಜುಕೇಶನ್ ಹಬ್ ಎಂಬ ಹೆಸರಿದ್ದು, ವಿದ್ಯಾರ್ಥಿಗಳ ಈ ಅನುಚಿತ ವರ್ತನೆಗೆ ಮಂಗಳೂರಿನ ಹೆಸರಿಗೆ ಕಳಂಕ ತರುತ್ತಿದೆ. ಈ ಕೃತ್ಯದ ಹಿಂದೆ ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾ ಜಾಲ ಅಡಗಿರುವ ಬಗ್ಗೆ ಸಂಶಯವಿದ್ದು, ಕೂಡಲೇ ಕಾಲೇಜಿಗಳ ಆಡಳಿತ ಮಂಡಳಿ ಕಾಲೇಜಿನಲ್ಲಿ ಶಿಸ್ತು ಕ್ರಮ ಕೈಗೊಳ್ಳಬೇಕು. ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಎಂದು ಬಜರಂಗದಳ ಜಿಲ್ಲಾ ಸಂಚಾಲಕರಾದ ಪುನೀತ್ ಅತ್ತಾವರ ಆಗ್ರಹಿಸಿದ್ದರು. ಇದಾದ ಬೆನ್ನಿಗೆ ಮತ್ತೇ ಅದೇ ಕಾಲೇಜಿನ ವಿದ್ಯಾರ್ಥಿಗಳು ಪಬ್ ಪಾರ್ಟಿ ನಡೆಸಿದ ಕಾರಣಕ್ಕೆ ಭಜರಂಗದಳ ತಡೆಯೊಡ್ಡಿದೆ ಎನ್ನಲಾಗಿದೆ.