LATEST NEWS
ಸಾಲುಮರ ನೆಡಲು 3 ವರ್ಷ ಕೆಲಸಕ್ಕೆ ರಜೆ ….!!
ಉಳ್ಳಾಲ : ಮಂಗಳೂರಿನ ತಲಪಾಡಿಯಿಂದ – ನಂತೂರು ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಸಾಲುಮರ ಗಿಡ ನಾಟಿ ಮಾಡುವ ಸಲುವಾಗಿ ಪರಿಸರವಾದಿ ಮಾಧವ ಉಳ್ಳಾಲ್ ತನ್ನ ಪಿಗ್ಮಿ ಕಲೆಕ್ಟರ್ ಉದ್ಯೋಗಕ್ಕೆ ಮೂರು ವರ್ಷಗಳ ಕಾಲ ರಜೆ ಘೋಷಿಸಿದ್ದಾರೆ. ಮಾಧವ ಅವರು ಮಂಗಳೂರಿನ ರಾಮಕೃಷ್ಣ ಕೋಆಪರೇಟಿವ್ ಸೊಸೈಟಿಯಲ್ಲಿ ಉದ್ಯೋಗದಲ್ಲಿದ್ದಾರೆ.
ಗ್ರೀನ್ ಗ್ಲೋಬಲ್ ಟೈಗರ್ಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ನವಯುಗ ಕನ್ ಸ್ಟ್ರಕ್ಷನ್, ಅರಣ್ಯ ಇಲಾಖೆ ಇದರ ಸಹಯೋಗದಲ್ಲಿ ತಲಪಾಡಿಯಿಂದ ನಂತೂರು ವರೆಗೆ ನಾರಾಯಣ ಗುರು ಸಾಮರಸ್ಯದ ಸಾಲುಮರ ಗಿಡ ನಾಟಿ ಕಾರ್ಯಕ್ರಮಕ್ಕೆ ಉಳ್ಳಾಲ ಉಳಿಯ ಕ್ಷೇತ್ರದ ಧರ್ಮದರ್ಶಿ ದೇವು ಮೂಲ್ಯಣ್ಣ ಅವರು ಗುರುವಾರ ಅಂಬಿಕಾರೋಡಿನಲ್ಲಿ ಚಾಲನೆ ನೀಡಿದರು.
ಪರಿಸರವಾದಿ ಮಾಧವ ಉಳ್ಳಾಲ್ ಮುತುವರ್ಜಿಯಲ್ಲಿ ನಮ್ಮ ಕ್ಷೇತ್ರದಲ್ಲಿ ನೆಟ್ಟಂತಹ 300 ಬೆಲೆಬಾಳುವ ಗಿಡಗಳಿಂದು ಬೃಹದಾಕಾರದ ಮರಗಳಾಗಿ ಬೆಳೆದಿವೆ. ಆ ಬೆಲೆಬಾಳುವ ಒಂದೊಂದು ಮರಗಳು ಮಾಧವ ಉಳ್ಳಾಲ್ ಹೆಸರು ಹೇಳುತ್ತಿವೆ. ಹಾಗಂತ ಪರಿಸರ ರಕ್ಷಣೆ ಮಾಧವ ಅವರಿಗೆ ಮಾತ್ರ ಸೀಮಿತವಲ್ಲ. ಪರಿಸರ ಉಳಿಸಿ ಬೆಳೆಸೋದು ನಮ್ಮೆಲ್ಲರ ಕರ್ತವ್ಯವಾಗಿದ್ದು ಆ ನಿಟ್ಟಿನಲ್ಲಿ ಈ ಯೋಜನೆ ಅರ್ಥಪೂರ್ಣ ಎಂದರು.
ಯೋಜನೆ ರೂವಾರಿ, ಪರಿಸರವಾದಿ ಮಾಧವ ಉಳ್ಳಾಲ್ ಮಾತನಾಡಿ ನಾವೆಲ್ಲ ಇಷ್ಟು ಶ್ರಮಪಟ್ಟು ಹಾಕಿರುವ ಯೋಜನೆ ಯಶಸ್ವಿಯಾಗಬೇಕು. ನಾವು ಇಂದು ನೆಟ್ಟ ಗಿಡ ಸತ್ತು ಆ ಹೊಂಡದಲ್ಲಿ ಇನ್ನೊಂದು ಗಿಡ ನೆಡುವಂತಾಗಬಾರದು. ಗಿಡಗಳನ್ನು ಹೆಮ್ಮರವಾಗಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡೋ ಜವಬ್ದಾರಿ ನಮೆಲ್ಲರದ್ದಾಗಿದೆ ಎಂದರು.