DAKSHINA KANNADA
ಬಿಳಿನೆಲೆ ಯುವಕನ ನಾಪತ್ತೆ ಪ್ರಕರಣ – ನಾಪತ್ತೆಯಾದ ಯುವಕನ ಕೊಲೆ ಶಂಕೆ…?
ಕಡಬ ಡಿಸೆಂಬರ್ 02: ಒಂದು ವಾರದ ಹಿಂದೆ ಕೆಲಸಕ್ಕೆಂದು ಹೋಗಿದ್ದ ಯುವನಕ ನಾಪುತ್ತೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ಮನೆಯವರು ಕಡಬ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಪತ್ತೆಯಾದ ಯುವಕನ ಕೊಲೆ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದು, ನೆಟ್ಟಣ ಪರಿಸರದಲ್ಲಿ ಗ್ರಾಮಸ್ಥರು ಶವ ಹುಡುಕುತ್ತಿದ್ದಾರೆ.
ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಕೆಲಸಕ್ಕೆಂದು ಹೋದವನು ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದಾರೆ. ಸಂದೀಪ್ ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು ನವಂಬರ್ 27ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವನು ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸಾಗಿರಲಿಲ್ಲ . ಈ ಬಗ್ಗೆ ವಿನಯ ಅವರಲ್ಲಿ ವಿಚಾರಿಸಿದಾಗ ಸಂದೀಪ್ ನೆಟ್ಟಣ ನಿವಾಸಿ ಪ್ರತೀಕ್‌ನೊಂದಿಗೆ ಕಾರಿನಲ್ಲಿ ಹೋಗಿರುವುದಾಗಿ ತಿಳಿಸಿದ್ದಾರೆ.
ಸಂದೀಪ್ ಆ ದಿನ ಮನೆಗೆ ಬಾರದೇ ಇದ್ದಾಗ ನೆರೆ ಕರೆಯವರಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸರೋಜಾ ಅವರು ಕಡಬ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಸಂದೀಪ್‌ನನ್ನು ಕಾರಿನಲ್ಲಿ ಕರೆದೊಯ್ದಿದ್ದಾನೆ ಎನ್ನಲಾಗಿರುವ ಪ್ರತೀಕ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ನಡುವೆ ನಾಪತ್ತೆಯಾದ ಯುವಕನ ಕೊಲೆ ಮಾಡಲಾಗಿದೆ ಎಂಬ ಶಂಕೆಯಲ್ಲಿ ಗ್ರಾಮಸ್ಥರು ನೆಟ್ಟಣ ಪರಿಸರದಲ್ಲಿ ಶವ ಹುಡುಕುತ್ತಿದ್ದಾರೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೋಲೀಸರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಯುವಕ ನಾಪತ್ತೆಯಾದ ಸಂದರ್ಭ ದೂರು ನೀಡಲು ಹೋದಾಗ ದೂರು ಪಡೆಯಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿದ ಗ್ರಾಮಸ್ಥರು, ಇದೇ ವಿಚಾರದಲ್ಲಿ ಪೋಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಸದ್ಯ ಯುವಕನ ಕುರಿತಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸ್ ಇಲಾಖೆ ತನಿಖೆ ಮುಂದುವರೆಸಿದೆ.