KARNATAKA
ಅಣ್ಣನ ಇಬ್ಬರು ಮಕ್ಕಳನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಕೊಂದ ಪಾಪಿ ತಮ್ಮ

ಬೆಂಗಳೂರು ಜುಲೈ 26: ಒಂದೇ ಕುಟುಂಬದ ಮೂವರು ಪುಟಾಣಿಗಳ ಮೇಲೆ ಅವರದೇ ಚಿಕ್ಕಪ್ಪ ಕಬ್ಬಿಣದ ರಾಡ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ನಡೆದಿದ್ದು ಅದರಲ್ಲಿ ಇಬ್ಬರು ಮಕ್ಕಳು ಪ್ರಾಣ ಕಳೆದುಕೊಂಡರೆ ಮತ್ತೊಬ್ಬ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಜೀವಮರಣ ಹೋರಾಟ ನಡೆಸುತ್ತಿದ್ದಾನೆ.
ಖಾಸೀಂ(35) ಕೊಲೆ ಮಾಡಿದ ಆರೋಪಿ. ಚಾಂದ್ ಪಾಶಾ ಅವರ 9 ಮತ್ತು 7 ವರ್ಷ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದಾರೆ. ಇನ್ನು 5 ವರ್ಷದ ಮಗ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾದಗಿರಿಯ ಕುರುಕುಂದ ಗ್ರಾಮದ ಚಾಂದ್ ಪಾಶಾ ಕುಟುಂಬಸ್ಥರು ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಗಾರೆ ಕೆಲಸ ಮಾಡುತ್ತಿದ್ದರು. ಅಣ್ಣ – ಅತ್ತಿಗೆ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲಿದ್ದ ಮಕ್ಕಳ ಮೇಲೆ ಚಿಕ್ಕಪ್ಪ ಕ್ರೌರ್ಯ ಮೆರೆದಿದ್ದಾನೆ.

ಘಟನೆ ನಡೆದ ಸಂದರ್ಭ ಮಕ್ಕಳ ಪೋಷಕರು ಕೆಲಸಕ್ಕೆ ಹೋಗಿದ್ದರು. ಮನೆಗೆ ಮರಳಿದ್ದ ಅಜ್ಜಿ ತರಕಾರಿ ತರಲು ಮಾರ್ಕೆಟ್‌ಗೆ ಹೊರಟಿದ್ದ ಸಂದರ್ಭದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಘಟನೆಗೆ ನಿಖರವಾದ ಕಾರಣ ಇನ್ನೂ ತಿಳಿದು ಬಂದಿಲ್ಲದಿದ್ದರೂ, ಖಾಸಿಂ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ಅಪರಾಧಿಯಾದ ಖಾಸಿಂ ಕಬ್ಬಿಣದ ರಾಡ್ ಮತ್ತು ಕಲ್ಲಿನಿಂದ ಮಕ್ಕಳ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಸ್ಥಳದಲ್ಲಿಯೇ ಇಬ್ಬರು ಮಕ್ಕಳು ಸಾವನ್ನಪ್ಪಿದರು. ತೀವ್ರವಾಗಿ ಗಾಯಗೊಂಡ ಮತ್ತೊಬ್ಬ ಬಾಲಕ ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ. ಆರೋಪಿ ಖಾಸಿಂನನ್ನು ಬಂಧಿಸಲಾಗಿದೆ.