LATEST NEWS
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಗೆ ಅಕ್ರಮ ಪ್ರವೇಶ: ಯುವಕನ ಬಂಧನ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಗೆ ಅಕ್ರಮ ಪ್ರವೇಶ: ಯುವಕನ ಬಂಧನ
ಮಂಗಳೂರು ಸೆಪ್ಟೆಂಬರ್ 15: ಮಂಗಳೂರು ಬಜ್ಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ಗೆ ಅಕ್ರಮ ಪ್ರವೇಶ ಮಾಡಿದ ಯುವಕನನ್ನು ವಾಯುಯಾನ ಭದ್ರತಾ ತಂಡದ ಸಿಬ್ಬಂದಿ ಶನಿವಾರ ತಡರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಂಧಿತನನ್ನು ಕೇರಳದ ಕಾಸರಗೋಡು ನಿವಾಸಿ ಆರಿಫ್ ಕೊಟಿಕ್ಕ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಶನಿವಾರ ತಡರಾತ್ರಿ 11:45ರ ಸುಮಾರಿಗೆ ಟರ್ಮಿನಲ್ ಕಟ್ಟಡದಿಂದ ನಿರ್ಗಮನ ದ್ವಾರದ ಮೂಲಕ ಹೊರಬರುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಕುಟುಂಬಸ್ಥರು ದುಬೈಗೆ ತೆರಳುತ್ತಿದ್ದ ಹಿನ್ನಲೆಯಲ್ಲಿ ಅವರನ್ನು ಬಿಳ್ಕೊಡಲು ಇಂದು ಬೆಳಗ್ಗೆ 12:54ಕ್ಕೆ ದುಬೈಗೆ ತೆರಳುತ್ತಿದ್ದ ಸ್ಪೈಸ್‌ಜೆಟ್ ಫ್ಲೈಟ್ ಎಸ್‌ಜಿ 59 ವಿಮಾನದ ಫ್ಯಾಬ್ರಿಕೇಟೆಡ್ ಇ-ಟಿಕೆಟ್ ತೋರಿಸಿ ಟರ್ಮಿನಲ್‌ನ್ನು ಪ್ರವೇಶಿಸಿದ್ದಾನೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ಕುಟುಂಬಸ್ಥರನ್ನು ಬೀಳ್ಕೊಟ್ಟ ಬಳಿಕ ಟರ್ಮಿನಲ್ ಕಟ್ಟಡದ ನಿರ್ಗಮನ ಗೇಟ್ ಮೂಲಕ ವಾಪಸಾಗುತ್ತಿದ್ದಾಗ ನಿಲ್ದಾಣದ ಸಿಬ್ಬಂದಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಟರ್ಮಿನಲ್ ಕಟ್ಟಡ ಪ್ರವೇಶಿಸಲು ಆರೋಪಿ ಟಿಕೆಟ್‌ನಲ್ಲಿ ತನ್ನ ಹೆಸರನ್ನು ಅಕ್ರಮವಾಗಿ ಸೇರಿಸಿಕೊಂಡಿದ್ದ ಎಂದು ತಿಳಿಸಿದ್ದಾನೆ. ಹೆಚ್ಚಿನ ವಿಚಾರಣೆಗೆ ಆರೋಪಿ ಪೊಲೀಸ್ ವಶಕ್ಕೆ ಪಡೆದಿದ್ದು, ಆರೋಪಿಯ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.