LATEST NEWS
ಉಡುಪಿ ಮಧ್ವ ಸರೋವರದಲ್ಲಿ ಮುಳುಗಿ ಯಾತ್ರಾರ್ಥಿ ಸಾವು

ಉಡುಪಿ ಮಧ್ವ ಸರೋವರದಲ್ಲಿ ಮುಳುಗಿ ಯಾತ್ರಾರ್ಥಿ ಸಾವು
ಉಡುಪಿ ಡಿಸೆಂಬರ್ 3: ಶ್ರೀ ಕೃಷ್ಣ ಮಠದ ಮಧ್ವ ಸರೋವರದಲ್ಲಿ ಯಾತ್ರಾರ್ಥಿಯೋರ್ವ ಮುಳುಗಿ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ.
ಮೃತ ವ್ಯಕ್ತಿಯನ್ನು ಶಿವಮೊಗ್ಗ ವಿದ್ಯಾನಗರ ನಿವಾಸಿ ಆದರ್ಶ್(39) ಎಂದು ಗುರುತಿಸಲಾಗಿದ್ದು, ಇಂದು ಬೆಳಿಗ್ಗೆ ಸುಮಾರು 5:30ರ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.

ಇಂದು ಮುಂಜಾನೆ ಆದರ್ಶ್ ಅವರು ಮಧ್ವ ಸರೋವರದಲ್ಲಿ ಸ್ನಾನಕ್ಕಿಳಿದವರು ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದರೂ ಪ್ರಯೋಜನವಾಗಲಿಲ್ಲ. ಬಳಿಕ ಮುಳುಗು ತಜ್ಞ ಅರುಣ ಕುಮಾರ್ ದೆಂದೂರುಕಟ್ಟೆ ಸರೋವರದ ತಳ ಜಾಲಾಡಿ ಮೃತದೇಹವನ್ನು ಮೇಲಕ್ಕೆ ತರಲಾಯಿತು.
ನಿನ್ನೆ ಭಾನುವಾರ ಉಡುಪಿಯ ವಸತಿಗೃಹದಲ್ಲಿ ತಂಗಿದ್ದ ಆದರ್ಶ್ ವಸತಿಗೃಹದ ನೋಂದಣಿ ಪುಸ್ತಕದಲ್ಲಿ ವಿದ್ಯಾನಗರ, 4ನೇ ಎ ಕ್ರಾಸ್ ಶಿವಮೊಗ್ಗ ಎಂಬ ವಿಳಾಸ ದಾಖಲಿಸಿದ್ದಾರೆ. ಮೃತದೇಹವನ್ನು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.ಘಟನೆ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.