LATEST NEWS
ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದವನ ಮೇಲೆ ಎಫ್ಐಆರ್

ಬೈಂದೂರು ಮೇ 26: ಸಾಕು ನಾಯಿಯೊಂದನ್ನು ಬೈಕಿಗೆ ಕಟ್ಟಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಇದೀಗ ಆರೋಪಿ ವಿರುದ್ದ ಬೈಂದೂರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
ಬೈಕ್ ಗೆ ನಾಯಿ ಕಟ್ಟಿ ಎಳೆದೊಯ್ದವನ್ನು ಬೈಂದೂರು ಪಡುವರಿ ಗ್ರಾಮದ ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ. ಯಡ್ತರೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಬೈಂದೂರು – ಕುಂದಾಪುರ ಏಕಮುಖ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ರಾವುತನಕಟ್ಟೆಯಿಂದ ನಾಕಟ್ಟೆ ಸೇತುವೆಯವರೆಗೆ ಪಡುವರಿ ಗ್ರಾಮದ ನಿವಾಸಿಯೊಬ್ಬ ತನ್ನ ಮನೆಯ ಸಾಕು ನಾಯಿಯೊಂದನ್ನು ಆತನ ಬೈಕಿಗೆ ಸರಪಳಿಯಿಂದ ಕಟ್ಟಿ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋ ಮೇ 25ರಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಈ ವಿಡಿಯೋವನ್ನು ಪೊಲೀಸರು ಗಮನಿಸಿದ್ದು, ಮೂಕಪ್ರಾಣಿಯನ್ನು ಈ ರೀತಿಯಾಗಿ ಹಿಂಸಾತ್ಮಕ ರೀತಿಯಲ್ಲಿ ಎಳೆದಾಡಿಕೊಂಡು ಹೋಗಿರುವುದರಿಂದ ನಾಯಿಯು ಗಾಯಗೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಅದರಂತೆ ಆರೋಪಿ ವಿರುದ್ಧ ಬೈಂದೂರು ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ.
