LATEST NEWS
ಪ್ರಶಾಂತ ಪೂಜಾರಿ ಹತ್ಯೆ ಆರೋಪಿಯ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

ಪ್ರಶಾಂತ ಪೂಜಾರಿ ಹತ್ಯೆ ಆರೋಪಿಯ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ
ಮಂಗಳೂರು ಸೆಪ್ಟೆಂಬರ್ 24: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಯುವಕನೋರ್ವನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮಾರಣಾಂತಿಕ ವಾಗಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಇಮ್ತಿಯಾಜ್ (30) ಎಂದು ಗುರುತಿಸಲಾಗಿದೆ. ಈತ ಮೂಡಬಿದ್ರೆಯ ನಡೆದ ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಆರೋಪಿ ಎಂದು ಹೇಳಲಾಗಿದೆ.

ಮೂಡಬಿದ್ರೆ ಠಾಣೆ ವ್ಯಾಪ್ತಿಯ ಗಂಟಾಲ್ ಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 6.30ಕ್ಕೆ ಇನ್ನೋವಾ ಕಾರಿನಲ್ಲಿ ಬಂದ ತಂಡ ಇಮ್ತಿಯಾಜ್ (30) ಎಂಬಾತನ ಮೇಲೆ ತಲವಾರಿನಿಂದ ಕಡಿದು ಪರಾರಿಯಾಗಿದೆ.
ಇಮ್ತಿಯಾಜ್ ಗಂಟಾಲ್ ಕಟ್ಟೆಯಲ್ಲಿ ಹೊಟೇಲ್ ಹೊಂದಿದ್ದು, ಇನ್ನೋವಾದಲ್ಲಿ ಬಂದಿದ್ದ ಯುವಕರು ಬೆಳಗ್ಗೆ ಚಹಾ ಕುಡಿಯಲೆಂದು ಹೊಟೇಲ್ ಒಳಗೆ ಬಂದಿದ್ದರು. ಚಹಾಕ್ಕೆಂದು ಇಮ್ತಿಯಾಜ್ ಒಳಹೋದಾಗಲೇ ತಲವಾರಿನೊಂದಿಗೆ ನುಗ್ಗಿದ ತಂಡ ಆತನ ತಲೆ ಮತ್ತು ಕಾಲಿಗೆ ಕಡಿದು ಪರಾರಿಯಾಗಿದೆ.
ಗಂಭೀರವಾಗಿ ಹಲ್ಲೆಗೊಳಗಾದ ಇಮ್ತಿಯಾಜ್ ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿದೆ. ಇಮ್ತಿಯಾಜ್, ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿ ಎನ್ನಲಾಗುತ್ತಿದ್ದು ಪ್ರತೀಕಾರಕ್ಕಾಗಿ ಕೊಲೆ ಯತ್ನ ನಡೆದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮೂಡಬಿದ್ರೆ ಠಾಣೆ ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯನ್ನು ಎರಡು ವರ್ಷಗಳ ಹಿಂದೆ ಮೂಡುಬಿದ್ರೆ ಪೇಟೆಯಲ್ಲಿ ದುಷ್ಕರ್ಮಿಗಳು ಬೆಳ್ಳಂಬೆಳಗ್ಗೆ ಕಡಿದು ಹತ್ಯೆ ಮಾಡಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಸಂಚಲನವನ್ನೂ ಸೃಷ್ಟಿ ಮಾಡಿತ್ತು.