ಮಂಗಳೂರು ಜುಲೈ 30: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಬಳಸಿರುವ ಭಾಷೆ ಹಾಗೂ ಮಾಡಿರುವ ವೈಯಕ್ತಿಕ ಆರೋಪಗಳು ಅತ್ಯಂತ ಖಂಡನೀಯ, ಬೇಜವಾಬ್ದಾರಿಯುತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಆರೋಪಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ದೇಶದ ಪ್ರಮುಖ ನಾಯಕರ ಘನತೆಗೆ ಧಕ್ಕೆ ತರುವ ರೀತಿಯ ಆರೋಪಗಳನ್ನು ಮಾಡುವುದು ರಾಜಕೀಯ ಸಂಸ್ಕೃತಿಗೆ ವಿರುದ್ಧವಾಗಿದೆ. ವೈಯಕ್ತಿಕ ನಿಂದನೆ ಮಾಡುವ ಬದಲು, ಜನರ ಸಮಸ್ಯೆಗಳ ಕುರಿತು ಚರ್ಚಿಸುವುದು ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ,” ಎಂದರು. “ರಾಹುಲ್ ಗಾಂಧಿ ಅವರ ಕುಟುಂಬವನ್ನು ಬಾಬರಿ ಮಸೀದಿ ಧ್ವಂಸ ಮಾಡಿದಂತೆ ಧ್ವಂಸ ಮಾಡುತ್ತೇವೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿರುವುದು ತೀವ್ರ ಆತಂಕಕಾರಿ. ಇಂತಹ ಮಾತುಗಳು ಸಮಾಜದಲ್ಲಿ ದ್ವೇಷ ಪ್ರಚೋದನೆ ಹಾಗೂ ಪ್ರಜಾಪ್ರಭುತ್ವ ವಿರೋಧಿ ಮನೋಭಾವವನ್ನು ಪ್ರತಿಬಿಂಬಿಸುತ್ತವೆ,” ಎಂದು ಅವರು ಟೀಕಿಸಿದರು.
ತಮ್ಮ ಹೇಳಿಕೆಯನ್ನು ಯಶ್ಪಾಲ್ ಸುವರ್ಣ ಅವರು ತಕ್ಷಣವೇ ಹಿಂತೆಗೆದುಕೊಂಡು ದೇಶದ ಜನರ ಕ್ಷಮೆಯಾಚಿಸಬೇಕು ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಈ ಹೇಳಿಕೆ ಕುರಿತು ಕಾನೂನುಬದ್ಧ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಮತಾ ಗಟ್ಟಿ ಒತ್ತಾಯಿಸಿದರು.