Connect with us

    LATEST NEWS

    ಮಲ್ಪೆಯಲ್ಲಿ ರಾಜ್ಯದ ಪ್ರಥಮ ಸೀ ವಾಕ್ ವೇ ಉದ್ಘಾಟನೆ

    ಮಲ್ಪೆಯಲ್ಲಿ ರಾಜ್ಯದ ಪ್ರಥಮ ಸೀ ವಾಕ್ ವೇ ಉದ್ಘಾಟನೆ

    ಉಡುಪಿ ಜನವರಿ 26: ಮಲ್ಪೆ ಅಭಿವೃದ್ದಿ ಸಮಿತಿ ವತಿಯಿಂದ , ಮಲ್ಪೆ ಪ್ರವಾಸಿ ಜೆಟ್ಟಿ ಬಳಿ 53.5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ 480 ಮೀ ಉದ್ದದ ರಾಜ್ಯದ ಪ್ರಥಮ ಸೀ ವಾಕ್ ವೇ ಯನ್ನು ರಾಜ್ಯದ ಮೀನುಗಾರಿಕೆ, ಯುವಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶುಕ್ರವಾರ ಉದ್ಘಾಟಿಸಿದರು.

    ನಂತರ ಮಾತನಾಡಿದ ಸಚಿವರು, ದೇಶದಲ್ಲಿ ಕೇರಳ ಬಿಟ್ಟರೆ ಮಲ್ಪೆಯಲ್ಲಿ ಮಾತ್ರ ಈ ರೀತಿಯ ವಾಕ್ ವೇ ಇದೆ , ಮಲ್ಪೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಇದುವರೆವಿಗೆ 22 ಕೋಟಿಗೂ ಅಧಿಕ ಮೊತ್ತದ ರಸ್ತೆ, ಸೇತುವೆ , ಮೀನುಗಾರಿಕಾ ಜೆಟ್ಟಿ ಮುಂತಾದ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ, ಮಲ್ಪೆ ಬಂದರು ದೇಶದಲ್ಲೇ ಅತೀ ಹೆಚ್ಚು ಮೀನುಗಾರಿಕಾ ದೋಣಿಗಳಿರುವ 2 ನೇ ಬಂದರು ಆಗಿದೆ, ಇಲ್ಲಿನ ಸೈಂಟ್ ಮೆರೀಸ್ ದ್ವೀಪ ದೇಶದ ಅತ್ಯಂತ ಸ್ವಚ್ಛ ದ್ವೀಪವಾಗಿದೆ ಎಂದು ಸಚಿವರು ಹೇಳಿದರು.

    ಮಲ್ಪೆ ಬೀಚ್ ರೀತಿಯಲ್ಲಿ ಪಡುಕರೆ ಬೀಚ್ ನ್ನೂ ಸಹ ಅಬಿವೃದ್ದಿಗೊಳಿಸಲಾಗುತ್ತಿದ್ದು, ಶೀಘ್ರದಲ್ಲಿ ಈ ಬೀಚ್ ಗೆ ಬ್ಲೂ ಫ್ಲಾಗ್ ನೊಂದಣಿ ಸಿಗಲಿದ್ದು, ಇದರಿಂದ ಅಂತಾರಾಷ್ಟ್ರೀಯ ಪ್ರವಾಸಿಗೂ ಇಲ್ಲಿಗೆ ಆಗಮಿಸಲಿದ್ದಾರೆ, ಈ ಪ್ರದೇಶದ ಯುವಕರು ಪ್ರವಾಸೋದ್ಯಮದ ಮೂಲಕ ಮೀನುಗಾರಿಕೆಗಿಂತ ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ , ಮಲ್ಪೆ ಬೀಚ್, ಪಡುಕರೆ ಬೀಚ್ , ಸೈಂಟ್ ಮೇರಿಸ್ ದ್ವೀಪ ಹಾಗೂ ಪ್ರಸ್ತುತ ನಿರ್ಮಾಣಗೊಂಡಿರುವ ಸೀ ವಾಕ್ ವೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲಿದ್ದು, ಪ್ರವಾಸೋದ್ಯಮದ ಅಬಿವೃದ್ದಿಗೆ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.

    ಮಲ್ಪೆ ಬೋಟ್ ಜೆಟ್ಟಿಯ ಬಳಿ ಸಮುದ್ರದಲ್ಲಿ ಈ ಹಿಂದೆ ಇದ್ದ ಬ್ರೇಕ್ ವಾಟರ್ ಕಲ್ಲಿನ ಹಾದಿಯ ಮೇಲೆ, ವಾಕ್ ವೇ ನಿರ್ಮಾಣಗೊಂಡಿದ್ದು, ಸಮುದ್ರದ ಮೇಲ್ಭಾಗದಲ್ಲಿ 480 ಮೀ ಉದ್ದ ಹಾಗೂ 9 ಮೀ ಅಗಲವಾಗಿದೆ, ವಾಕ್ ವೇ ಯಲ್ಲಿ ಪ್ರವಾಸಿಗರು ನಡೆದಾಡಲು ಅನುಕೂಲವಾಗುವಂತೆ ಇಂಟರ್ ಲಾಕ್ ಅಳವಡಿಸಲಾಗಿದ್ದು, ಸಮುದ್ರದ ಪ್ರಕೃತಿ ಸೌಂದರ್ಯ ಕುಳಿತು ವೀಕ್ಷಿಸಲು ಕಲ್ಲಿನ ಬೆಂಚ್ ಗಳ ವ್ಯವಸ್ಥೆ ಇದ್ದು, ವಾಕ್ ವೇ ಯ ಅಂತ್ಯದಲ್ಲಿ ಸುಂದರ ಕಲಾಕೃತಿ ನಿರ್ಮಿಸಲಾಗಿದೆ.

    ವಾಕ್ ವೇ ಉದ್ದಕ್ಕೂ ಅಲಂಕಾರಿಕಾ ದೀಪಗಳ ಅಳವಡಿಸಿದ್ದು ,ಈ ವಾಕ್ ವೇ ಯಿಂದ ಸೈಂಟ್ ಮೇರಿಸ್ ಐಲ್ಯಾಂಡ್ ಸೇರಿದಂತೆ ಸಮೀಪದ 3 ದ್ವೀಪಗಳನ್ನು ವೀಕ್ಷಿಸಬಹುದಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *