LATEST NEWS
ಮಲ್ಪೆ ಮೀನುಗಾರರ ಪ್ರತಿಭಟನೆಯಲ್ಲಿ ಕಾಂಗ್ರೇಸ್ ಮುಖಂಡನ ಮಾತಿಗೆ ಸ್ಟೇಜ್ ಗೆ ನುಗ್ಗಿದ ಮೀನುಗಾರರು….!!

ಉಡುಪಿ ಮಾರ್ಚ್ 22: ಮಲ್ಪೆ ಬಂದರಿನ ಮೀನುಗಾರರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ಹಾಗೂ ಬಂಧಿತ ಮೀನುಗಾರರ ಬಿಡುಗಡೆಗೆ ಆಗ್ರಹಿಸಿ ಮಲ್ಪೆ ಮೀನುಗಾರರ ಸಂಘ ಹಾಗೂ ಮಲ್ಪೆಯ ಸಮಸ್ತ ಮೀನುಗಾರರ ವತಿಯಿಂದ ಬಂದರಿನೊಳಗೆ ಶನಿವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಈ ವೇಳೆ ಕಾಂಗ್ರೇಸ್ ಮುಖಂಡ ರಮೇಶ್ ಕಾಂಚನ್ ಮಾತಿಗೆ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿ ಸ್ಟೇಜ್ ಗೆ ನುಗ್ಗಿದ ಘಟನೆ ನಡೆದಿದೆ.
ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರಿಗೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಮೀನುಗಾರರನ್ನು ಬಿಡುಗಡೆಗೆ ಒತ್ತಾಯಿಸಿ ಇಂದು ಬೃಹತ್ ಪ್ರತಿಭಟನೆ ನಡೆದಿದೆ. ಮೀನುಗಾರ ಮುಖಂಡರು ಉಡುಪಿ ಜಿಲ್ಲಾ ಎಸ್ಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಐದು ವರ್ಷಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮೀನುಗಾರರಿಗೆ ತೊಂದರೆಯಾಗುತ್ತದೆ ಎಂದು ನಾವು ಪ್ರತಿಭಟನೆ ನಡೆಸಿದಾಗ ನಮ್ಮ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಆಗ ಶಾಸಕರಾಗಿದ್ದ ಪ್ರಮೋದ್ ಮಧ್ವರಾಜ್ ಅವರು ಪೊಲೀಸರ ವಿರುದ್ಧ ಈಗಿನ ಆಕ್ರೋಶ ತೋರಿಸಿಲ್ಲ ಎಂದರು.
ಆಗ ಸಭೆಯಲ್ಲಿದ್ದ ಮೀನುಗಾರರು ವೇದಿಕೆಯತ್ತ ನುಗ್ಗಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅವರ ಭಾಷಣಕ್ಕೆ ತಡೆಯೊಡ್ಡಿದರು. ಅಲ್ಪ ಸಮಯದ ಬಳಿಕ ಪೊಲೀಸ್ ಭದ್ರತೆಯಲ್ಲಿ ಅವರನ್ನು ಸಭೆಯಿಂದ ಹೊರಗೆ ಕರೆದೊಯ್ಯಲಾಯಿತು. ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಸುವರ್ಣ, ಮುಖಂಡರಾದ ಸಾಧು ಸಾಲ್ಯಾನ್, ಮೋಹನ್ ಕುಂದರ್, ಜಯ ಸಿ. ಕೋಟ್ಯಾನ್, ರವಿರಾಜ್ ಸುವರ್ಣ, ಬೇಬಿ ಸಾಲ್ಯಾನ್, ಗೀತಾ ಕರ್ಕೇರ, ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಉಪಸ್ಥಿತರಿದ್ದರು. ಮಲ್ಪೆಯಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.