LATEST NEWS
ಮಲ್ಪೆ – ಮೀನುಗಾರಿಕಾ ಬೋಟ್‌ಗೆ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂಪಾಯಿ ನಷ್ಟ

ಮಲ್ಪೆ ಫೆಬ್ರವರಿ 21: ಬಾಪುತೋಟ ಬಳಿಯ ಮೀನುಗಾರಿಕಾ ಬಂದರಿನ ಸೇತುವೆ ಪಕ್ಕದ ದಕ್ಕೆಯಲ್ಲಿ ನಿಲ್ಲಿಸಲಾಗಿದ್ದ ಮೀನುಗಾರಿಕಾ ಬೋಟ್ ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಬೋಟ್ ಸಂಪೂರ್ಣ ಸುಟ್ಟು ಹೋದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.
ಮಲ್ಪೆಯ ಜನಾರ್ದನ ಟಿ. ಕಾಂಚನ್ ಎಂಬವರಿಗೆ ಸೇರಿದ ‘ರವಿಪ್ರಕಾಶ್’ ಎಂಬ ಸಣ್ಣಟ್ರಾಲ್ (ಫಿಶಿಂಗ್) ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸ್ಥಳೀಯ ದೋಣಿಯವರು ಗಮನಿಸಿ ಸಕಾಲದಲ್ಲಿ ಮಾಹಿತಿ ನೀಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ಆ ಬೋಟಿನ ಮೀನುಗಾರರು ಮೀನುಗಾರಿಕೆ ಮುಗಿಸಿಬಂದು ಬೋಟನ್ನು ಬಾಪುತೋಟದ ಬಳಿಯ ದಕ್ಕೆಯಲ್ಲಿ ನಿಲ್ಲಿಸಿದ್ದರು. ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಸಕಾಲದಲ್ಲಿ ಬೆಂಕಿ ನಂದಿಸಿದ್ದಾರೆ.
ಬೆಂಕಿಗಾಹುತಿಯಾದ ಬೋಟಿನಲ್ಲಿ ಬಲೆ, 200 ಲೀ. ಡಿಸೇಲ್, ಜಿಪಿಎಸ್, ಫಿಶ್ ಫೈಂಡರ್, ಲೈಫ್ ಜಾಕೆಟ್, ವಾಟರ್ ಟ್ಯಾಂಕರ್, ಬಾಕ್ಸ್ ಇದ್ದು, ಸುಮಾರು 15 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.