LATEST NEWS
ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆ ಕಟ್ಟಿಹಾಕಿ ಹಲ್ಲೆ ಪ್ರಕರಣ ಇಬ್ಬರು ಬೀಟ್ ಕಾನ್‌ಸ್ಟೇಬಲ್ ಸಸ್ಪೆಂಡ್

ಉಡುಪಿ ಮಾರ್ಚ್ 21: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ಇಬ್ಬರು ಮಹಿಳೆಯರನ್ನು ಅರೆಸ್ಟ್ ಮಾಡಲಾಗಿದೆ. ಅಲ್ಲದೆ ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಆಧಾರದಲ್ಲಿ ಇಬ್ಬರು ಬೀಟ್ ಕಾನ್‌ಸ್ಟೇಬಲ್ ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ. ತಿಳಿಸಿದ್ದಾರೆ.
ಬಂಧಿತರನ್ನು ಈ ಪ್ರಕರಣದಲ್ಲಿ ಆರೋಪಿಗಳಾದ ಲೀಲಾ ಮತ್ತು ಪಾರ್ವತಿ ಎಂದು ಗುರುತಿಸಲಾಗಿದೆ. ಹಲ್ಲೆ ಪ್ರಕರಣದ ಕುರಿತು ಸರಿಯಾಗಿ ಮಾಹಿತಿ ಸಂಗ್ರಹಿಸದ ಕಾರಣ ಇಬ್ಬರು ಬೀಟ್ ಕಾನ್‌ಸ್ಟೇಬಲ್‌ಗಳಾದ ಹೆಡ್ ಕಾನ್‌ಸ್ಟೇಬರ್ ಸುರೇಶ್ ಹಾಗೂ ಪೊಲೀಸ್ ಕಾನ್‌ಸ್ಟೇಬಲ್ ನಾಗರಾಜ್ ಎಂಬವರನ್ನು ಅಮಾನತುಗೊಳಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ದಲಿತ ಮಹಿಳೆಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಂಧಿತ ಐವರು ಆರೋಪಿಗಳಿಗೆ ಎಪ್ರಿಲ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. ಮಾರ್ಚ್ 19ರಂದು ಬಂಧಿಸಿದ ಆರೋಪಿಗಳಾದ ಲಕ್ಷ್ಮಿ, ಶಿಲ್ಪ, ಸುಂದರ್ ಅವರನ್ನು ಅದೇ ದಿನ ರಾತ್ರಿ ನ್ಯಾಯಾಧೀಶರ ಮನೆ ಮುಂದೆ ಹಾಜರುಪಡಿಸಿದ್ದು ಮೂವರನ್ನು ಎ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ಇಂದು ಬಂಧಿಸಿದ ಆರೋಪಿಗಳಾದ ಪಾರ್ವತಿ ಹಾಗೂ ಲೀಲಾ ಅವರನ್ನು ಕೂಡ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ಅವರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.