UDUPI
ಮಲ್ಪೆ ಬೀಚ್ ಅಭಿವೃದ್ದಿ ಕಾಮಗಾರಿ ಶೀಘ್ರ ಕಾರ್ಯರೂಪಕ್ಕೆ ತನ್ನಿ – ಪ್ರಮೋದ್
ಮಲ್ಪೆ ಬೀಚ್ ಅಭಿವೃದ್ದಿ ಕಾಮಗಾರಿ ಶೀಘ್ರ ಕಾರ್ಯರೂಪಕ್ಕೆ ತನ್ನಿ – ಪ್ರಮೋದ್
ಉಡುಪಿ ಜನವರಿ 25: ಮಲ್ಪೆ ಬೀಚ್ ಅಭಿವೃದ್ದಿ ಕುರಿತಂತೆ ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳನ್ನು ಹಾಗೂ ಕಾಮಗಾರಿಗಳನ್ನು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರುವಂತೆ ಮೀನುಗಾರಿಕೆ, ಯುವಜನ ಸಬಲೀಕರಣ, ಕ್ರೀಡಾ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.
ಅವರು ಗುರುವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ದಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಲ್ಪೆ ಬೀಚ್‍ನ ಪಾರ್ಕಿಂಗ್ ಪ್ರದೇಶದಲ್ಲಿ ಶೌಚಾಲಯ ನಿರ್ಮಿಸುವಂತೆ ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳಿಗೆ ಸೂಚಿಸಿದ ಸಚಿವರು ಫೆಬ್ರವರಿ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ, ಮಲ್ಪೆಯ ಬಲರಾಮ ಸರ್ಕಲ್ ಬಳಿ ಬಸ್ ನಿಲ್ದಾಣ ನಿರ್ಮಿಸುವ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿ, ಬೀಚ್ ಅಭಿವೃದ್ದಿ ಕುರಿತಂತೆ ನಗರಸಭಾ ಸದಸ್ಯ ಪ್ರಶಾಂತ್ ಅಮೀನ್ ನೀಡಿರುವ ಪಟ್ಟಿಯಲ್ಲಿನ ಕಾಮಗಾರಿಗಳನ್ನು ಶೀಘ್ರ ಕಾರ್ಯರೂಪಕ್ಕೆ ತರುವಂತೆ ಪೌರಾಯುಕ್ತ ಮಂಜುನಾಥಯ್ಯ ಅವರಿಗೆ ಸಚಿವರು ಸೂಚಿಸಿದರು.
ಮಲ್ಪೆ ಬೀಚ್ ನಲ್ಲಿರುವ ವೇದಿಕೆ ಬಳಿ 2 ಗ್ರೀನ್ ರೂಂ ನಿರ್ಮಿಸುವಂತೆ ಹಾಗೂ ಅಲ್ಲಿರುವ ಶೌಚಾಲಯ ಬಳಿ ಬಯೋ ಡೈಜೆಸ್ಟ್ ನಿರ್ಮಿಸುವಂತೆ ಸೂಚಿಸಿದ ಸಚಿವರು, ಸೈಂಟ್ ಮೇರಿಸ್ ದ್ವೀಪದಲ್ಲಿರುವ ಆಹಾರ ಮಳಿಗೆಗಳಲ್ಲಿ ನಿಗಧಿಪಡಿಸಿದ ದರಗಳ ಕುರಿತು ದರಪಟ್ಟಿಯನ್ನು ಪ್ರದರ್ಶಿಸುವಂತೆ , ಆಗಮಿಸುವ ಪ್ರವಾಸಿಗರಿಗೆ ಆಹಾರದ ಕೊರತೆಯಾಗದಂತೆ ಹಾಗೂ ಬೀಚ್ ಮತ್ತು ದ್ವೀಪದ ನೈಸರ್ಗಿಕ ಸೌಂದರ್ಯ ಹಾಳಾಗದಂತೆ ಎಚ್ಚರ ವಹಿಸುವಂತೆ ಮತ್ತು ಪ್ರವಾಸಿಗರಿಗೆ ಪೂರಕ ವಾತಾವರಣ ನಿರ್ಮಿಸುವಂತೆ ತಿಳಿಸಿದರು.
ಮಲ್ಪೆ ಬೀಚ್ ನಲ್ಲಿರುವ ಎಲ್ಲಾ ಅಂಗಡಿಗಳಿಗೆ ಪ್ರತ್ಯೇಕ ನಂಬರ್ ನೀಡುವಂತೆ ಸೂಚಿಸಿದ ಸಚಿವರು, ಬೀಚ್ ಅಭಿವೃದ್ದಿ ಸಮಿತಿ ಕಚೇರಿ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೌರಾಯುಕ್ತರಿಗೆ ತಿಳಿಸಿದರು. ಬೀಚ್ ಅಭಿವೃದ್ಧಿ ಕುರಿತಂತೆ ಅಗತ್ಯ ಕಾಮಗಾರಿ ಕೈಗೊಳ್ಳುವ ಕುರಿತಂತೆ ಹಣಕಾಸಿನ ಕೊರತೆ ಇಲ್ಲ ಆದ್ದರಿಂದ ಆದಷ್ಟು ಬೇಗ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸಿ, ಅನುಮೋದನೆ ಪಡೆದು ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಸಚಿವರು ಹೇಳಿದರು.