LATEST NEWS
ಮಲ್ಪೆ ಬೀಚ್ ನಲ್ಲಿ ಮುಳುಗಿ ಓರ್ವ ಸಾವು ಮತ್ತೊರ್ವ ಗಂಭೀರ

ಉಡುಪಿ ಅಕ್ಟೋಬರ್ 05: ದಸರಾ ರಜೆಗೆ ಸಮುದ್ರದಲ್ಲಿ ಆಟವಾಡಲು ಹೋಗಿದ್ದ ಓರ್ವ ಸಾವನಪ್ಪಿರುವ ಮತ್ತೊರ್ವ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿರುವ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ. ಮಂಗಳವಾರ ಮಲ್ಪೆ ಬೀಚ್‌ನಲ್ಲಿ ಮುಳುಗುತ್ತಿದ್ದ ಒಟ್ಟು ಆರು ಮಂದಿ ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದ್ದು ಅದರಲ್ಲಿ ಓರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮತ್ತೊಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ದಸರಾ ರಜೆ ಇರುವುದರಿಂದ ಮಲ್ಪೆ ಹಾಗೂ ಸುತ್ತಮುತ್ತಲಿನ ಬೀಚ್‌ಗಳಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಮೈಸೂರು ಮೂಲದ ತೋಸಿಭ್ ಮಂಗಳವಾರ ಮಲ್ಪೆ ಬೀಚ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಜೀವರಕ್ಷಕರು ಬಹಳ ಕಷ್ಟಪಟ್ಟು ಅವರನ್ನು ರಕ್ಷಿಸಿದ್ದಾರೆ. ಕುಟುಂಬ ಸಮೇತ ಬೀಚ್‌ಗೆ ಭೇಟಿ ನೀಡಿದ್ದ ತಮಿಳುನಾಡಿನ ಸೇಲಂ ಮೂಲದ ಸೆಂಥಿಲ್ ಮತ್ತು ಬಿಜಿಪುರ ಮೂಲದ ಬಸವರಾಜು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಜೀವರಕ್ಷಕರು ರಕ್ಷಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ ನವಾಜ್ ಕುಡಿದು ಸಮುದ್ರದಲ್ಲಿ ಈಜುತ್ತಿದ್ದು, ಮಧ್ಯಾಹ್ನ 2:30ರ ಸುಮಾರಿಗೆ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಜೀವರಕ್ಷಕರು ಕೂಡಲೇ ಆತನನ್ನು ರಕ್ಷಿಸಿದ್ದಾರೆ.

ತನ್ನ ಸ್ನೇಹಿತರೊಂದಿಗೆ ಈಜುತ್ತಿದ್ದ ಸೋಹಮ್ ಘೋಷ್ ಸಮುದ್ರದ ಅಲೆಯಲ್ಲಿ ಸಿಲುಕಿದ್ದು, ಅವರನ್ನು ಕೂಡ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ ಬೆಂಗಳೂರಿನ ಸಲಾಮ್ ಚೆರ್ರಿ ಮತ್ತು ಮೈಸೂರಿನ ಅಬ್ರಾರ್ ಈಜಲು ಹೋಗಿದ್ದರು, ಜೀವರಕ್ಷಕರು ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ ನಂತರವೂ. ಸಂಜೆ 4.30ರ ಸುಮಾರಿಗೆ ನೀರಿನಲ್ಲಿ ಮುಳುಗಿದ್ದು, ಜೀವರಕ್ಷಕ ದಳದ ಸಿಬ್ಬಂದಿ ಕಷ್ಟಪಟ್ಟು ರಕ್ಷಿಸಿದ್ದಾರೆ. ಸಲಾಮ್ ಚೆರ್ರಿ ಅವರನ್ನು ತಕ್ಷಣವೇ ರಕ್ಷಿಸಲಾಯಿತು ಮತ್ತು ಗಂಭೀರ ಸ್ಥಿತಿಯಲ್ಲಿದ್ದ ಅಬ್ರಾರ್ ಅಹ್ಮದ್ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಶ್ವಾಸಕೋಶದ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ.