LATEST NEWS
ಮಳಲಿ ಮಸೀದಿ ಜಾಗದಲ್ಲಿ ಭವ್ಯ ಮಂದಿರ ಕಟ್ಟುತ್ತೇವೆ: ಶರಣ್ ಪಂಪ್‌ವೆಲ್

ಮಂಗಳೂರು ನವೆಂಬರ್ 09: ಮಳಲಿ ಮಸೀದಿ ವಿವಾದ ಕುರಿತ ಕೋರ್ಟ್ ತೀರ್ಪು ಇಂದು ಬಂದಿದ್ದು, ಮಸೀದಿ ಕಮಿಟಿಯವರು ವಕ್ಫ್ ಆಸ್ತಿಯೆಂದು ಸಲ್ಲಿಸಿದ್ದ ಅರ್ಜಿಯನ್ನು ಮಂಗಳೂರಿನ ಮೂರನೇ ಸಿವಿಲ್ ಕೋರ್ಟ್ ವಜಾ ಮಾಡಿದೆ. ಇದು ಮೊದಲ ಹಂತದಲ್ಲಿ ಹಿಂದುಗಳಿಗೆ ಸಿಕ್ಕ ಜಯವಾಗಿದೆ ಎಂದು ಎಂಬುದಾಗಿ ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.
ಮಳಲಿ ಮಸೀದಿ ಕುರಿತ ತೀರ್ಪು ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿ ನಡೆಸಿದ ಶರಣ್ ಪಂಪ್ವೆಲ್, ಕಳೆದ ಎಪ್ರಿಲ್ 19ರಂದು ಮಸೀದಿ ನವೀಕರಣ ಕಾರ್ಯಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಆನಂತರ ನ್ಯಾಯಾಲಯದಲ್ಲಿ ಹೋರಾಟ ಮುಂದುವರಿಸಿದ್ದೆವು. ಈಗ ಮಸೀದಿ ಕಡೆಯ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದು, ನಮಗೆ ಮೊದಲ ಹಂತದ ಜಯ ಸಿಕ್ಕಂತಾಗಿದೆ. ಮುಂದಿನ ವಿಚಾರಣೆ ಜನವರಿ 8ಕ್ಕೆ ಇರಲಿದ್ದು, ದೇವಸ್ಥಾನ ಎನ್ನುವ ಕುರಿತು ಎಲ್ಲ ದಾಖಲೆಗಳನ್ನು ಮುಂದಿಡುತ್ತೇವೆ. ಕೋರ್ಟ್ ತೀರ್ಪಿನ ಬಳಿಕ ಅದೇ ಜಾಗದಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡಲಿದ್ದೇವೆ ಎಂದು ಹೇಳಿದರು.

ಈ ಬಗ್ಗೆ ಹೆಚ್ಚಿನ ಪುರಾವೆ ಕಲೆ ಹಾಕಲು ನ್ಯಾಯಾಲಯವು ಕಮಿಷನರ್ ಅವರನ್ನು ನಿಯೋಜಿಸಬೇಕು. ಜಿಲ್ಲಾಡಳಿತಕ್ಕೂ ಈ ವಿಚಾರದಲ್ಲಿ ಜವಾಬ್ದಾರಿ ಇದೆ. ಅವರು ಪುರಾತತ್ವ ಇಲಾಖೆಯಿಂದ ಸರ್ವೆ ಮಾಡಿಸಬೇಕು’ ಎಂದು ಅವರು ಒತ್ತಾಯಿಸಿದರು.
ಇಲ್ಲಿ ಶಿವನ ಸಾನ್ನಿಧ್ಯ ಇತ್ತು. ಇಲ್ಲಿ ದೇವಸ್ಥಾನವನ್ನು ಕಟ್ಟಿಸದಿದ್ದರೆ ಊರಿಗೂ ತೊಂದರೆ ಇದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿದೆ. ಇಲ್ಲಿ ಪುರಾತನ ದೇವಸ್ಥಾನ ಇತ್ತು. ಆ ಕಟ್ಟಡದ ಎದುರು ನಿಂತು ಕೈಮುಗಿಯುತ್ತಿದ್ದೆವು ಎಂದು ಸ್ಥಳೀಯ ಹಿರಿಯರನೇಕರು ತಿಳಿಸಿದ್ದಾರೆ. ಇಲ್ಲಿ ಅಷ್ಟಮಂಗಳ ಪ್ರಶ್ನೆ ನಡೆಸಿ ಇನ್ನಷ್ಟು ಆಳವಾಗಿ ಮಾಹಿತಿ ಕಲೆ ಹಾಕುತ್ತೇವೆ. ನ್ಯಾಯಾಲಯದಲ್ಲೂ ನಮ್ಮ ಪರವಾಗಿಯೇ ತೀರ್ಪು ಬರುತ್ತದೆ ಎಂಬ ವಿಶ್ವಾಸವಿದೆ’ ಎಂದು ತಿಳಿಸಿದರು.