DAKSHINA KANNADA
ಕಾರ್ಮಿಕನ ವಿವಾಹಕ್ಕೆ ಸರಕಾರದ ಸಹಾಯಧನ ಪಡೆಯಲು ಗಂಡು,ಹೆಣ್ಣಿಗೆ ವಯಸ್ಸು 21 ಆಗಲೇ ಬೇಕಂತೆ..!!
ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮದುವೆಯ ವಯಸ್ಸು ಹೆಣ್ಣಿಗೂ, ಗಂಡಿಗೂ 21ವರ್ಷ ಎಂಬರ್ಥದ ಉತ್ತರ ನೀಡಿದ್ದರು. 21 ವರ್ಷ ಆಗದೇ ಇದ್ದಲ್ಲಿ ಕಾಯ್ದೆಯಲ್ಲಿ ಮದುವೆಗೆ ಅವಕಾಶವೇ ಇಲ್ಲ.
ಬಂಟ್ವಾಳ: ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಲ್ಪಟ್ಟ ಕಾರ್ಮಿಕನ ವಿವಾಹಕ್ಕೆ ಸರಕಾರದಿಂದ ಸಿಗುವ ಸಹಾಯಧನ ಪಡೆಯುವ ವಿಚಾರದಲ್ಲಿ ಕಾರ್ಮಿಕ ಇಲಾಖೆಯ ದ.ಕ.ಉಪವಿಭಾಗ-2 ರ ಕಾರ್ಮಿಕ ಅಧಿಕಾರಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿದಾರರು ಕೇಳಲಾದ ಪ್ರಶ್ನೆಗೆ ನೀಡಿರುವ ವಿಭಿನ್ನ ಉತ್ತರದಿಂದ ಕಾರ್ಮಿಕರು ಗೊಂದಲಕ್ಕೊಳಗಾಗಿದ್ದಾರೆ.
ವಿಶೇಷ ವಿವಾಹ ಅಧಿನಿಯಮ 1854 ಕಲಂ13 ರನ್ವಯ ವಿವಾಹ ನೋಂದಣಾಧಿಕಾರಿಯವರು ನೀಡಿರುವ ಮದುವೆ ಪ್ರಮಾಣಪತ್ರ ಮದುವೆ ಸಹಾಯಧನ ಪಡೆಯಲು ಸಲ್ಲಿಸಬಹುದೆ? ಎಂದು ಮಾಹಿತಿ ಹಕ್ಕುಕಾಯ್ದೆಯಡಿ ಪ್ರಶ್ನಿಸಿದ್ದರು.
ಈ ಪ್ರಶ್ನೆಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಮದುವೆಯ ವಯಸ್ಸು ಹೆಣ್ಣಿಗೂ, ಗಂಡಿಗೂ 21ವರ್ಷ ಎಂಬರ್ಥದ ಉತ್ತರ ನೀಡಿದ್ದರು. 21 ವರ್ಷ ಆಗದೇ ಇದ್ದಲ್ಲಿ ಕಾಯ್ದೆಯಲ್ಲಿ ಮದುವೆಗೆ ಅವಕಾಶವೆ ಇಲ್ಲ ಎಂಬಂತೆ ಉತ್ತರ ನೀಡಲಾಗಿದ್ದು,ಈ ಉತ್ತರವು ಹಲವಾರು ಗೊಂದಲಗಳಿಗೆ ಕಾರಣವಾಗಿತ್ತು.
ಇದಾದ ನಂತರ ಮತ್ತೋರ್ವ ಅರ್ಜಿದಾರರೋರ್ವರು ಇದೇ ಮಾದರಿಯ ಪ್ರಶ್ನೆಯನ್ನು ಅದೇ ಅಧಿಕಾರಿಗೆ ಮಾಹಿತಿ ಹಕ್ಕಿನಲ್ಲಿ ಕೇಳಿದ್ದರು.
ಎರಡನೇ ಫಲಾನುಭವಿ ಸಲ್ಲಿಸಿದ ಅರ್ಜಿಗೆ ‘ಈ ಕಚೇರಿಯಲ್ಲಿ ಈ ಬಗ್ಗೆ ಯಾವುದೇ ದಾಖಲೆಗಳು ಇರುವುದಿಲ್ಲ’ ಎಂದು ಉತ್ತರಿಸಿದ್ದಾರೆ.
ಕಾರ್ಮಿಕ ಅಧಿಕಾರಿಯವರ ಈ ವಿಭಿನ್ನ ಉತ್ತರದಿಂದ ನೋಂದಾಯಿತು ಕಾರ್ಮಿಕರು ಸರಕಾರದ ಸವಲತ್ತು ಪಡೆಯುವಲ್ಲಿ ಗೊಂದಲಕ್ಕೊಳಗಾಗಿದ್ದಾರೆ.
ಸರಕಾರವೇನೋ ದುಡಿಯುವ ಕಾರ್ಮಿಕ ವರ್ಗಕ್ಕೆ ಸವಲತ್ತುಗಳನ್ನು ನೀಡುತ್ತದೆ.ಆದರೆ ಅಧಿಕಾರಿಗಳು ಹಾಕುವಂತ ಕೊಕ್ಕೆಯಿಂದಾಗಿ ಸವಲತ್ತು ಫಲಾನುಭವಿಗಳಿಗೆ ತಲುಪುವಲ್ಲಿ ಸಾಧ್ಯವಾಗುತ್ತಿಲ್ಲ !