LATEST NEWS
ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್‌ನಲ್ಲಿ ಕಾಸರಗೋಡಿನ ಯೋಧ ಹುತಾತ್ಮ…!!

ಕಾಸರಗೋಡು ಅಕ್ಟೋಬರ್ 22: ಅರುಣಾಚಲ ಪ್ರದೇಶದಲ್ಲಿ ಪತನಗೊಂಡ ಸೇನಾ ಹೆಲಿಕಾಪ್ಟರ್‌ನಲ್ಲಿ ಕಾಸರಗೋಡಿನ ಕೆ.ವಿ. ಅಶ್ವಿನ್ (24) ಎಂಬ ಯೋಧ ಮೃತರಾಗಿರುವ ಕುರಿತು ವರದಿಯಾಗಿದೆ. ಎಚ್‌ಎಎಲ್ ನಿರ್ಮಿತ ರುದ್ರ (ALH-WSI) ಎಂಬ ಸುಧಾರಿತ ಕಾಪ್ಟರ್ ನಿನ್ನೆ ಪತನಗೊಂಡು ನಾಲ್ವರು ಮೃತಪಟ್ಟಿದ್ದರು. ಹೆಲಿಕಾಪ್ಟರ್‌ನಲ್ಲಿ ಒಟ್ಟು ಐದು ಜನರಿದ್ದರು.
ಕಾಸರಗೋಡಿನ ಚೆರ್ವತತೂರು ಕಾಟುವಳಪ್ಪಿನ ಅಶೋಕನ್ ಮತ್ತು ಕೆ.ವಿ. ಕೌಶಲ್ಯ ದಂತಪಿ ಪುತ್ರ ಕೆ.ವಿ. ಅಶ್ವಿನ್ (24) ಈ ಹೆಲಿಕಾಪ್ಟರ್ ಪತನದಲ್ಲಿ ಮೃತಪಟ್ಟಿದ್ದಾರೆ. ಈ ಕುರಿತು ಸೇನಾ ಅಧಿಕಾರಿಗಳು ಅಶ್ವಿನ್ ಅವರ ಮನೆಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಮನೆಯಲ್ಲಿ ಶೋಕ ಮಡುಗಟ್ಟಿದೆ.

ಅಶ್ವಿನ್ ಅವರು ಸೇನೆಗೆ ಸೇರಿ ನಾಲ್ಕು ವರ್ಷಗಳಾಗಿದೆಯಷ್ಟೇ. ಇವರು ಎಲೆಕ್ಟ್ರಾನಿಕ್ ಆಂಡ್ ಮೆಕಾನಿಕಲ್ ವಿಭಾಗದಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದರು. ಇತ್ತೀಚಿಗೆ ಇವರು ರಜೆಯಲ್ಲಿ ಮನೆಗೂ ಬಂದಿದ್ದರು.
ಅಶ್ವಿನಿ ಮೃತಪಟ್ಟಿರುವ ಸುದ್ದಿಯನ್ನು ಸೇನೆ ಖಚಿತಪಡಿಸಿದ ಬಳಿಕ ಇವರ ಕುಟುಂಬ ಮತ್ತು ಸ್ನೇಹಿತರು ಆಘಾತಕ್ಕೆ ಒಳಗಾಗಿದ್ದಾರೆ. ಒಂದು ಮೂಲದ ಪ್ರಕಾರ ಇವರ ಮೃತದೇಹ ನಾಳೆಯೇ ಕಾಸರಗೋಡು ತಲುಪುವ ಸಾಧ್ಯತೆಯಿದೆ. ಆದರೆ, ಇದನ್ನು ಜಿಲ್ಲಾಡಳಿತ ಖಚಿತಗೊಳಿಸಿಲ್ಲ.