ಮಲಪ್ಪುರಂ ಅಗಸ್ಟ್ 03: ಪಣಕ್ಕಾಡ್-ಮಲಪ್ಪುರಂ ರಸ್ತೆಯ ಕರಾರ್ಥೋಡ್ ಬಳಿ ಸೋಮವಾರ ಬೆಳಿಗ್ಗೆ 8 ಗಂಟೆಯ ಸುಮಾರಿಗೆ ಭಾರಿ ಭೂಕುಸಿತ ಸಂಭವಿಸಿದ್ದು, ಸಂಪೂರ್ಣ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬೆಟ್ಟದ ಬೃಹತ್ ಭಾಗ ಕುಸಿದುಬಿದ್ದ ವೇಳೆ ಸ್ಥಳದಲ್ಲಿದ್ದ ನೂರಾರು ಜನರು ಹಾಗೂ ಮಾಧ್ಯಮ ಸಿಬ್ಬಂದಿ ಓಡಿ ಪ್ರಾಣ ಉಳಿಸಿಕೊಂಡಿದ್ದು, ಕೂದಲೆಳೆ ಅಂತರದಲ್ಲಿ ಭಾರಿ ಜೀವಹಾನಿ ತಪ್ಪಿದೆ.

ಭೂಕುಸಿತದ ವರದಿ ಮಾಡುತ್ತಿದ್ದ ವೇಳೆ ಮಾಧ್ಯಮ ಸಿಬ್ಬಂದಿ ಜಯೇಶ್ ವಿಲ್ಲೋಡಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ನಡೆದ ಸ್ಥಳವು ಕೈಗಾರಿಕಾ ಸಚಿವ ಪಿ.ಕೆ. ಕುನ್ಹಾಲಿಕುಟ್ಟಿ ಅವರ ನಿವಾಸದ ಸಮೀಪದಲ್ಲೇ ಇದೆ. ಅನಿಯಂತ್ರಿತ ಮಣ್ಣು ಗಣಿಗಾರಿಕೆ ಹಾಗೂ ಅವೈಜ್ಞಾನಿಕ ನಿರ್ಮಾಣ ಕಾಮಗಾರಿಯೇ ಬೆಟ್ಟ ಕುಸಿಯಲು ಕಾರಣ ಎಂದು ಆರೋಪಿಸಿ ಸ್ಥಳೀಯರು ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಹಾಗೂ ಕೈಗಾರಿಕಾ ಸಚಿವ ಪಿ.ಕೆ. ಕುನ್ಹಾಲಿಕುಟ್ಟಿ, “ಆಸ್ಪತ್ರೆ ನಿರ್ಮಾಣಕ್ಕಾಗಿ ಕಾಯ್ದಿರಿಸಿದ್ದ ಜಾಗದಲ್ಲಿ ಈ ದುರಂತ ನಡೆದಿದೆ. ಅನಿಯಂತ್ರಿತ ಮಣ್ಣು ಅಗೆದಿರುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಟಾಪ್ ಮೆಮೊ (Stop Memo) ನೀಡಲಾಗಿದ್ದು, ಯಾವುದೇ ನಿಯಮ ಉಲ್ಲಂಘನೆಯಾಗಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದ್ದಾರೆ. ವೆಂಗಾರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಜೆಸಿಬಿ ಯಂತ್ರಗಳ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.