DAKSHINA KANNADA
ಮಂಗಳೂರು: ಮಳಲಿ ಮಸೀದಿ ವಿವಾದ, ಯಥಾಸ್ಥಿತಿ ಕೋರಿದ್ದ ಹಿಂದೂ ಸಂಟಘಟನೆಗಳ ಅರ್ಜಿ ತಿರಸ್ಕಾರ..!
ಮಂಗಳೂರು: ಮಂಗಳೂರು ಹೊರವಲಯದ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಪಹಣಿ ಪತ್ರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ಹಿಂದೂ ಸಂಘಟನೆಗಳ ಮನವಿಯನ್ನು ಸ್ಥಳೀಯ ಸಹಾಯಕ ಕಮಿಷನರ್ (ಎಸಿ) ಕೋರ್ಟ್ ತಿರಸ್ಕರಿಸಿದೆ. ಕರ್ನಾಟಕ ಸೇರಿ ದೇಶಾದ್ಯಂತ ವಕ್ಸ್ ಆಸ್ತಿ ವಿವಾದ ನಡೆಯುತ್ತಿರುವಾಗಲೇ ಈ ಆದೇಶ ಹೊರ ಬಿದ್ದಿದೆ.
ಮಸೀದಿಯ ಪಹಣಿ ಪತ್ರದಲ್ಲಿ ಸರ್ಕಾರಿ ಭೂಮಿ ಜೊತೆಗೆ ಮಸೀದಿ ಜಾಗ ಎಂದು ನಮೂದಾಗಿರುವ ವಿಚಾರಕ್ಕೆ ಸಂಬಂಧಿಸಿ ಹಿಂದಿನ ಸಹಾಯಕ ಕಮಿಷನರ್ ಕೋರ್ಟ್ ಯಥಾಸ್ಥಿತಿಗೆ ಸೂಚಿಸಿತ್ತು. ಈ ವಿವಾದದ ಕುರಿತು ಮಂಗಳೂರಿನ ಜಿಲ್ಲಾ ಮೂರನೇ ಸಿವಿಲ್ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು, ಅಂತಿಮ ತೀರ್ಪು ಬರುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಿಂದೂ ಸಂಘಟನೆಗಳು ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಎಸಿ ಕೋರ್ಟ್ ತಿರಸ್ಕರಿಸಿದ್ದು, ಇದರ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಲು ಹಿಂದೂ ಸಂಘಟನೆಗಳು ತೀರ್ಮಾನಿಸಿವೆ.
ಮಳಲಿ ಮಸೀದಿಯ ಪಹಣಿ ಪತ್ರದ ಕಾಲಂ 9ರಲ್ಲಿ ಸರ್ಕಾರಿ ಜಾಗ ಎಂದಿದ್ದು, ಕಾಲಂ 11ರಲ್ಲಿ ಮಸೀದಿಯ ಹೆಸರು ನಮೂದಿಸಲಾಗಿದೆ. ಈ ದ್ವಂದ್ವವನ್ನು ಪ್ರಶ್ನಿಸಿ ಹಿಂದೂ ಸಂಘಟನೆಗಳು ಈ ಹಿಂದಿನ ಸಹಾಯಕ ಕಮಿಷನರ್ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಲ್ಲದೆ, ಕಂದಾಯ ದಾಖಲೆ (ಆರ್‌ಟಿಸಿ) ಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸುವಲ್ಲಿ ಸಫಲರಾಗಿದ್ದವು.
2022ರಲ್ಲಿ ಮಳಲಿ ಮಸೀದಿ ನವೀಕರಣ ವೇಳೆ ಹಿಂದೂ ಧಾರ್ಮಿಕ ಕೇಂದ್ರದ ಕುರುಹು ಪತ್ತೆಯಾಗಿತ್ತು. ಆಗಮಸೀದಿ ಕಟ್ಟಡ ಜಾಗದಲ್ಲಿ ಉತ್ಪತನನ ನಡೆಸುವಂತೆ ಕೋರಿ ಹಿಂದೂ ಸಂಘಟನೆಗಳು ಕೋರ್ಟ್‌ಗೆ 2022ರ ಏ.22ರಂದು ಅರ್ಜಿ ಸಲ್ಲಿಸಿದ್ದವು. ಮಸೀದಿ ಆಸ್ತಿ ಯಾರಿಗೆ ಸೇರಿದೆ ಎಂದು ತೀರ್ಮಾನಿಸುವಂತೆ ಜಿಲ್ಲಾ ಸಿವಿಲ್ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಈ ಕುರಿತ ವಿಚಾರಣೆ ನಡೆಯುತ್ತಿದ್ದು, ಅಂತಿಮ ತೀರ್ಪು ಬಾಕಿ ಇದೆ.