LATEST NEWS
ಎನ್ ಇಪಿ ರದ್ದು ನಿರ್ಧಾರ ಮಕ್ಕಳ ಭವಿಷ್ಯಕ್ಕೆ ಮಾರಕ: ಶಾಸಕ ಕಾಮತ್

ಮಂಗಳೂರು ಅಗಸ್ಟ್ 20: ರಾಜ್ಯದಲ್ಲಿ ಎನ್‌ಇಪಿ ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ಹೇಳಿಕೆ ನೀಡಿರುವುದು ಖಂಡನೀಯವಾಗಿದ್ದು, ಇದು ದೇಶದ ಒಕ್ಕೂಟ ವ್ಯವಸ್ಥೆಗೆ ಹಾಗೂ ಭವಿಷ್ಯದ ಪ್ರಜೆಗಳಿಗೆ ಇದು ಮಾರಕ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಪ್ರತಿಕ್ರಿಯಿಸಿದ್ದಾರೆ.
ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿತ್ತು. ಈ ನೀತಿ ಅನುಸಾರವೇ ಹಿಂದಿನ ಬಿಜೆಪಿ ಆಡಳಿತಾವಧಿಯಲ್ಲಿ ದೇಶದಲ್ಲೇ ಮೊದಲಾಗಿ ಎನ್ ಇಪಿ ಜಾರಿಗೆ ತರಲಾಗಿತ್ತು. ಹಲವು ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿದ ಬಳಿಕವೇ ನೀತಿ ಜಾರಿಗೆ ಬಂದಿತ್ತು. ರಾಜ್ಯ ಸರಕಾರ ಈಗ ಈ ನೀತಿ ರದ್ದು ಮಾಡಲು ಮುಂದಾಗಿರುವುದು ಶಿಕ್ಷಣ ವ್ಯವಸ್ಥೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಶಿಕ್ಷಣ ಎನ್ನುವುದು ಪ್ರಗತಿಯ ಸಂಕೇತವಾಗಿ ಇರಬೇಕೇ ವಿನಃ ರಾಜಕೀಯದ ದಾಳ ಆಗಬಾರದು. ಕರ್ನಾಟಕದ ನಿಲುವು ಸುಧಾರಣೆ ವಿರೋಧಿ ಎಂಬುದು ಸ್ಪಷ್ಟವಾಗಿ ಕಾಣುತ್ತದೆ. ರಾಜಕೀಯ ಕಾರಣದಿಂದ ಮಕ್ಕಳ ಭವಿಷ್ಯದ ಮೇಲೆ ಚೆಲ್ಲಾಟವಾಡುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ನಮ್ಮಲ್ಲಿ ಇದ್ದ ಬ್ರಿಟಿಷ್ ಕಾಲದ ಶಿಕ್ಷಣ ವ್ಯವಸ್ಥೆಯನ್ನು ಬದಲಾಯಿಸಿ ಈಗಿನ ಪರಿಸ್ಥಿಗೆ ಪೂರಕವಾಗಿ ಶಿಕ್ಷಣ ನೀತಿ ರೂಪಿಸಿ ಜಾರಿಗೆ ತರಲಾಗಿತ್ತು. ಆದರೆ ಕಾಂಗ್ರೆಸ್ ನ ಮನಸ್ಥಿತಿ ಇನ್ನೂ ಬ್ರಿಟಿಷ್ ಕಾಲದಲ್ಲೇ ಇದೆ. ಮಕ್ಕಳು ಇನ್ನೂ ಅದೇ ವ್ಯವಸ್ಥೆಯಲ್ಲಿ ಶಿಕ್ಷಣ ಪಡೆಯಲಿ ಎಂಬುದು ಕಾಂಗ್ರೆಸ್ ನ ಆಶಯವಾಗಿದೆ. ಎನ್ ಇಪಿ ರದ್ದು ಮಾಡಿದರೆ ನಮ್ನ ಮಕ್ಕಳಿಗೆ ದ್ರೋಹ ಮಾಡಿದಂತಾಗಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಎನ್ ಇಪಿ ರದ್ದು ಮಾಡಬಾರದು ಎಂದು ಶಾಸಕ ಕಾಮತ್ ಆಗ್ರಹಿಸಿದರು.