LATEST NEWS
ಬೆಂಕಿ ವದಂತಿಗೆ ಹೆದರಿ ಪುಷ್ಪಕ್ ರೈಲಿನಿಂದ ಇಳಿದ ಪ್ರಯಾಣಿಕರ ಮೇಲೆ ಹರಿದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು!
ಮುಂಬೈ ಜನವರಿ 22: ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವಂದತಿಗೆ ರೈಲಿನ ಚೈನ್ ಎಳೆದು ನಿಲ್ಲಿಸಿ, ರೈಲಿನಿಂದ ಇಳಿದವರ ಮೇಲೆ ಮತ್ತೊಂದು ರೈಲು ಹರಿದು 10ಕ್ಕೂ ಅಧಿಕ ಮಂದಿ ಸಾವನಪ್ಪಿದ ಘಟನೆ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಸಂಭವಿಸಿದೆ.
ಜಲಗಾಂವ್ ಜಿಲ್ಲೆಯ ಪಚೋರಾ ತಾಲೂಕಿನ ಜಲಗಾಂವ್ – ಮುಂಬಯಿ ರೈಲು ಮಾರ್ಗದಲ್ಲಿ ಮಹಿಜಿ ಮತ್ತು ಪರ್ಧಾಡೆ ನಿಲ್ದಾಣಗಳ ನಡುವೆ ಈ ಭೀಕರ ಘಟನೆ ಸಂಭವಿಸಿದೆ. ಲೋಕೋಪೈಲೆಟ್ ಸಿಗ್ನಲ್ ಸಿಕ್ಕ ಹಿನ್ನಲೆ ಪುಷ್ಪಕ್ ಎಕ್ಸ್‌ಪ್ರೆಸ್ ಬ್ರೇಕ್ ಹಾಕಿದ್ದಾರೆ. ಈ ವೇಳೆ ರೈಲಿನ ಗಾಲಿಗಳಿಂದ ಬೆಂಕಿ ಕಿಡಿ ಹೊರಬಂದಿದೆ. ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಭೀತಿಯಲ್ಲಿ ಕೆಲ ಪ್ರಯಾಣಿಕರು ರೈಲಿನ ಚೈನ್ ಎಳೆದಿದ್ದಾರೆ. ಈ ವೇಳೆ ಹಲವರು ಅಪಾಯದಿಂದ ಪಾರಾಗಲು ರೈಲಿನಿಂದ ಕೆಳಕ್ಕೆ ಜಿಗಿದು ಮತ್ತೊಂದು ಹಳಿಗೆ ಬಂದಿದ್ದಾರೆ. ಈ ವೇಳೆ ಕರ್ನಾಟಕ ಎಕ್ಸ್‌ಪ್ರೆಸ್ ಬಂದಿದ್ದು ಹಳಿಯಲ್ಲಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಇದರಿಂದಾಗಿ ಸಾವು ನೋವು ಜಾಸ್ತಿಯಾಗಿದೆ.
ದೆಹಲಿಯಿಂದ ಬೆಂಗಳೂರಿಗೆ ಕರ್ನಾಟಕ ಎಕ್ಸ್‌ಪ್ರೆಸ್ ಬರುತ್ತಿದ್ದರೆ, ಪುಷ್ಪಕ್ ಎಕ್ಸ್‌ಪ್ರೆಸ್ ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ಮುಂಬೈಗೆ ಬರುತ್ತಿತ್ತು. ಜಲಗಾಂವ್‌ನ ಪರಂದಾ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಹಳಿಗಳ ಕಾಮಗಾರಿ ನಡೆಯುತ್ತಿರುವುದರಿಂದ ರೈಲಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ. ಹೀಗಾಗಿ ಪುಷ್ಪಕ್ ಎಕ್ಸ್‌ಪ್ರೆಸ್ ರೈಲು ನಿಧಾನಗೊಳಿಸಲು ಬ್ರೇಕ್ ಹಾಕುತ್ತಿದ್ದಂತೆ, ಚಕ್ರಗಳಿಂದ ಕಿಡಿಗಳು ಹೊರಹೊಮ್ಮಿವೆ. ಇದನ್ನು ಕಂಡ ಪ್ರಯಾಣಿಕರು ಭಯಭೀತರಾಗಿದ್ದಾರೆ. ಕೂಡಲೇ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ವದಂತಿ ಹಬ್ಬಿದೆ ಎಂದು ವರದಿಯಾಗಿದೆ. ಈ ಘಟನೆಯಿಂದ ಇತರೆ ರೈಲುಗಳ ಸಂಚಾರಕ್ಕೂ ತೊಂದರೆಯಾಗಿದೆ.