DAKSHINA KANNADA
ಮಹಾರಾಷ್ಟ್ರ ಉದ್ಯಮಿ ಕಾರು ಅಡ್ಡಗಟ್ಟಿ ದರೋಡೆ – ವಿಟ್ಲದಲ್ಲಿರುವ ಆರೋಪಿ ಮುಹಮ್ಮದ್ ಇಸಾಮ್ ಮನೆಯಲ್ಲಿ ಕಾರವಾರ ಪೊಲೀಸರಿಂದ ಪರಿಶೀಲನೆ

ವಿಟ್ಲ ಮೇ 21 : ಮಹಾರಾಷ್ಟ್ರ ಮೂಲದ ಉದ್ಯಮಿಯ ಕಾರನ್ನು ಅಡ್ಡಗಟ್ಟಿ ಕೋಟಿಗೂ ಹೆಚ್ಚು ದರೋಡೆ ನಡೆಸಿ ವಿದೇಶಕ್ಕೆ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರವಾರ ಪೊಲೀಸರು ವಿಟ್ಲದಲ್ಲಿರುವ ಪ್ರಕರಣದ ಆರೋಪಿಯೊಬ್ಬನ ಮನೆಯನ್ನು ಜಾಲಾಡಿದ್ದಾರೆ. ಕೇಪು ಗ್ರಾಮದ ಕಲ್ಲಂಗಳ ನಿವಾಸಿ ಮುಹಮ್ಮದ್ ಇಸಾಮ್ ಎಂಬಾತನ ಮನೆಗೆ ಕಾರವಾರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕಾರವಾರ ಠಾಣಾ ವ್ಯಾಪ್ತಿಯಲ್ಲಿ ಕೆಲಸಮಯಗಳ ಹಿಂದೆ ಮಹಾರಾಷ್ಟ್ರ ಮೂಲದ ಉದ್ಯಮಿಯ ಕಾರನ್ನು ತಡೆದು ಹನ್ನೊಂದು ಜನರ ತಂಡ ಭಾರಿ ದರೋಡೆ ನಡೆಸಿ ಪರಾರಿಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಕಾರವಾರ ಪೊಲೀಸರು ಆರೋಪಿಗಳ ಪೈಕಿ ಎಂಟು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ವಿದೇಶಕ್ಕೆ ಪರಾರಿಯಾದ ಮೂವರು ಆರೋಪಿಗಳ ಪೈಕಿ ಓರ್ವ ವಿಟ್ಲ ಠಾಣಾ ವ್ಯಾಪ್ತಿಯ ಕೇಪು ಗ್ರಾಮದ ಕಲ್ಲಂಗಳ ನಿವಾಸಿ ಮುಹಮ್ಮದ್ ಇಸಾಮ್.

ಕೆಲ ತಿಂಗಳ ಹಿಂದೆ ವಿಟ್ಲದ ಸರ್ಕಾರಿ ಬಸ್ ನಿಲ್ದಾಣ ಸಮೀಪದ ವಾಣಿಜ್ಯ ಸಂಕೀರ್ಣದಲ್ಲಿ ಮಹಮ್ಮದ್ ಇಸಾಮ್ ತನ್ನ ಸ್ನೇಹಿತರ ಜೊತೆ ಟ್ರಾವೆಲ್ಸ್ ಕಛೇರಿ ತೆರೆದಿದ್ದ. ದರೋಡೆ ಕೃತ್ಯದ ಬಳಿಕ ವಿದೇಶಕ್ಕೆ ಪರಾರಿಯಾದ ಇಸಾಮ್ ಬಂಧನಕ್ಕಾಗಿ ನ್ಯಾಯಾಲಯ ಸರ್ಚ್ ವಾರೆಂಟ್ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಕಾರವಾರ ಪೊಲೀಸರ ತಂಡ ವಿಟ್ಲ ಪೊಲೀಸರ ಸಹಕಾರದೊಂದಿಗೆ ಕಲ್ಲಂಗಳದಲ್ಲಿರುವ ಮಹಮ್ಮದ್ ಇಸಾಮ್ ಮನೆಗೆ ದಾಳಿ ನಡೆಸಿದೆ. ಸುಮಾರು ಎರಡು ಗಂಟೆಗಳ ಕಾಲ ಪೊಲೀಸರ ತಂಡ ಇಸಾಮ್ ಮನೆಯಲ್ಲಿ ತನಿಖೆ ನಡೆಸಿದೆ. ಮನೆಯವರ ಜತೆಗೆ ಸಂಪರ್ಕ ಹಾಗೂ ಆತನ ವಿವಿಧ ಮಾಹಿತಿಯನ್ನು ಈ ಸಂದರ್ಭ ಸಂಗ್ರಹಿಸಿದ್ದಾರೆನ್ನಲಾಗಿದೆ.
ಆರೋಪಿ ಮಹಮ್ಮದ್ ಇಸಾಮ್ ಪಿ. ಡಿ ಎನ್ ಎ. ಭ್ರಷ್ಟಾಚಾರ ನಿಗ್ರಹದಳ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷನಾಗಿ ಆಯ್ಕೆಯಾದ್ದು, ಸ್ಪೀಕರ್ ಯು.ಟಿ ಖಾದರ್ ಅವರ ಬೆಂಗಳೂರಿನ ಸರಕಾರಿ ನಿವಾಸದಲ್ಲಿ ಅಧಿಕಾರ ಸ್ವೀಕರಿಸಿದ್ದನು ಎಂದು ವರದಿಯಾಗಿತ್ತು.