BELTHANGADI
ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ
ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿಯಲ್ಲಿ ಮಹಾಮಸ್ತಕಾಭಿಷೇಕ
ಬೆಳ್ತಂಗಡಿ ಸೆಪ್ಟೆಂಬರ್ 11: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿ ಸ್ವಾಮಿಗೆ 2019ರ ಫೆಬ್ರವರಿಯಲ್ಲಿ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದೆ ಎಂದು ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ . ಡಿ, ವಿರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಸೋಮವಾರ ಧರ್ಮಸ್ಥಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರತ್ನವರ್ಮ ಹೆಗ್ಗಡೆ ಹಾಗೂ ತಾಯಿ ರತ್ನಮ್ಮನವರ ಆದೇಶದ ಮೇರೆಗೆ ಇಲ್ಲಿ 1982ರಲ್ಲಿ ಭಗವಾನ್ ಬಾಹುಬಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಪ್ರಸ್ತುತ 4ನೇ ಮಹಾಮಸ್ತಾಕಾಭಿಷೇಕ ನಡೆಯಲಿದೆ. ದಿನಾಂಕದ ಕುರಿತು ಗುರುಗಳ ಜತೆ ರ್ಚಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದರು.
1982ರ ಬಳಿಕ 1994, 2007ರಲ್ಲಿ ಮಸ್ತಕಾಭಿಷೇಕ ಕೈಗೊಳ್ಳಲಾಗಿತ್ತು. ಇದೀಗ 2019ರಲ್ಲಿ 4ನೇ ಬಾರಿಗೆ ಮಹಾಭಿಷೇಕವನ್ನು ದಿಗಂಬರ ಆಚಾರ್ಯರಾದ ವರ್ಧಮಾನ ಸಾಗರಜೀ ಮುನಿ ಮಹಾರಾಜ್, ಪುಷ್ಪದಂತ ಸಾಗರ್‌ಜೀ ಮುನಿ ಮಹಾರಾಜ್ ಮತ್ತು 15 ಮಂದಿ ದಿಗಂಬರ ಆಚಾರ್ಯರ ನೇತೃತ್ವದಲ್ಲಿ ನೆರವೇರಿಸಲಾಗುವುದು. ಜೀನೇ ಔರ್ ಜೀನೇ ದೋ(ಬದುಕು ಮತ್ತು ಬದುಕಲು ಬಿಡು) ಎಂಬ ಧ್ಯೇಯ ವಾಕ್ಯದಡಿ ಲೋಕಕಲ್ಯಾಣಾರ್ಥ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸುಮಾರು 8 ದಿನಗಳ ಕಾಲ ನಡೆಯುವ ನಾನಾ ಕಾರ್ಯಕ್ರಮಗಳ ಬಗ್ಗೆ ಇನ್ನಷ್ಟೇ ದಿನಾಂಕ ನಿರ್ಧಾರವಾಗಬೇಕಾಗಿದೆ ಎಂದರು. ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರಕಾರ ಈಗಾಗಲೇ ಅನೇಕ ಸಹಕಾರ ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದು, ಸರಕಾರದ ಎಲ್ಲ ಇಲಾಖೆಗಳ ನೆರವನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
ಮಹಾಮಸ್ತಕಾಭಿಷೇಕದ ಯಶಸ್ಸಿಗೆ ಸೋಮವಾರ ಕ್ಷೇತ್ರದಲ್ಲಿ ಮೊದಲ ಸಮಾಲೋಚನೆ ಸಭೆ ನಡೆಸಲಾಗಿದ್ದು ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಮೂಡುಬಿದರೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ರಾಜ್ಯಮಟ್ಟದ ಸಮಿತಿ ರಚಿಸಲಾಗಿದ್ದು, ರಾಜ್ಯದ ಎಲ್ಲ ಕಡೆಗಳಿಂದ ಶ್ರಾವಕರು, ಸಂಘ ಸಂಸ್ಥೆಗಳು ಪ್ರತಿನಿಧಿಕರಿಸಿದ್ದಾರೆ. ಅವರೆಲ್ಲರೂ ತಮ್ಮ ಬೆಂಬಲ ಘೋಷಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.