DAKSHINA KANNADA
ಟವರ್ ಏರಿ ಭಗ್ನಪ್ರೇಮಿಯ ಹೈಡ್ರಾಮಾ!: ಯುವತಿ ಬಂದ ಬಳಿಕ ಇಳಿದ ಪ್ರೇಮಿ…

ಮಂಗಳೂರು, ಎಪ್ರಿಲ್ 18: ಭಗ್ನಪ್ರೇಮಿಯೋರ್ವ ಟವರ್ ಏರಿ ಹೈಡ್ರಾಮಾ ಸೃಷ್ಟಿಸಿರುವ ಘಟನೆಯೊಂದು ನಗರದ ಅಡ್ಯಾರ್ ಬಳಿ ನಡೆದಿದೆ. ನಗರದ ಹೊರವಲಯದ ಅಡ್ಯಾರ್ ನಿವಾಸಿ ಸುಧೀರ್ ಎಂಬಾತ ಹೈಡ್ರಾಮಾ ಮಾಡಿ ಅವಾಂತರ ಸೃಷ್ಟಿಸಿದಾತ. ಸುಧೀರ್ ಅಡ್ಯಾರ್‌ನಲ್ಲಿಯೇ ಬಸ್ ಕ್ಲೀನರ್ ಆಗಿ ಕೆಲಸ ಮಾಡ್ತಿದ್ದಾನೆ.
ಈತ ಫರಂಗಿಪೇಟೆಯ ಮಾರಿಪಳ್ಳದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ, ಇದು ಏಕಮುಖ ಪ್ರೀತಿಯಾಗಿದ್ದು, ಆಕೆ ಈತನನ್ನು ನಿರ್ಲಕ್ಷಿಸಿದ್ದಳು. ಆದರೆ, ಭಗ್ನಪ್ರೇಮಿ ಸುಧೀರ್ ಮಾತ್ರ ಆಕೆಯನ್ನು ಪ್ರೀತಿಸುವಂತೆ ಹಿಂದೆ ಬಿದ್ದಿದ್ದ ಎನ್ನಲಾಗಿದೆ.

ಭಗ್ನಪ್ರೇಮಿ ಸುಧೀರ್ ಕಿರುಕುಳದಿಂದ ಬೇಸತ್ತ ಯುವತಿ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿದ್ದಳು. ಇದರಿಂದ ಮನನೊಂದ ಸುಧೀರ್ ಟವರ್ ಏರಿ ಆತ್ಮಹತ್ಯೆ ಮಾಡಿ ಕೊಳ್ಳುವುದಾಗಿ ಅವಾಂತರ ಸೃಷ್ಟಿಸಿದ್ದಾನೆ.
ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸುಧೀರ್‌ನನ್ನು ಟವರ್‌ನಿಂದ ಇಳಿಸಲು ಹರಸಾಹಸಪಟ್ಟರೂ ಆತ ಇಳಿದಿರಲಿಲ್ಲ. ಕೊನೆಗೆ ಯುವತಿಯೇ ಬಂದು ದೂರು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ ಮೇಲೆ ಟವರ್ ನಿಂದ ಇಳಿದಿದ್ದಾನೆ ಎಂದು ತಿಳಿದು ಬಂದಿದೆ.