LATEST NEWS
ನಾನು ಜೈಲಿನಲ್ಲಿ ಸಾಯುವುದೇ ಉತ್ತಮ – ಜಡ್ಜ್ ಮುಂದೆ ಕೈಕಟ್ಟಿ ಕಣ್ಣೀರಿಟ್ಟ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್
ಮುಂಬೈ ಜನವರಿ 07 : ಒಂದು ಕಾಲದಲ್ಲಿ ಭಾರತದ ವಿಮಾನಯಾನ ಕ್ಷೇತ್ರವನ್ನು ಆಳಿದ್ದ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್ ದಯನೀಯ ಸ್ಥಿತಿಯಲ್ಲಿದ್ದು, ನಾನು ಜೈಲಿನಲ್ಲಿ ಸಾಯುವುದೇ ಉತ್ತಮ ಎಂದು ಜಡ್ಜ್ ಮುಂದೆ ಕೈಕಟ್ಟಿ ಕಣ್ಣೀರಿಟ್ಟಿದ್ದಾರೆ.
ಕೆನರಾ ಬ್ಯಾಂಕ್ ಗೆ ಮಾಡಿದ 538 ಕೋಟಿ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಜೆಟ್ ಏರ್‌ವೇಸ್ (Jet Airways) ಸಂಸ್ಥಾಪಕ ನರೇಶ್ ಗೋಯಲ್ ಶನಿವಾರ ವಿಶೇಷ ನ್ಯಾಯಾಲದಯಲ್ಲಿ (Special Court) ಈ ಮಾತನ್ನು ಹೇಳಿದರು. ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಕಳೆದ ವರ್ಷ ಸೆಪ್ಟೆಂಬರ್ 1 ರಂದು ಗೋಯಲ್ ಅವರನ್ನು ಬಂಧಿಸಿತ್ತು. ಅವರು ಪ್ರಸ್ತುತ ಇಲ್ಲಿನ ಆರ್ಥರ್ ರೋಡ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ವಿಶೇಷ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ ಅವರ ಮುಂದೆ ಗೋಯಲ್ ಅವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಗಾಗಿ ಗೋಯಲ್ ಅವರನ್ನು ಶನಿವಾರ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಜಡ್ಜ್ ಮುಂದೆ ಕೈಕಟ್ಟಿ ಕಣ್ಣೀರು ಸುರಿಸುತ್ತಾ, ಪತ್ನಿ ಆರೋಗ್ಯದ ಕುರಿತು ಮಾತನಾಡಿದರು. ಪತ್ನಿ ಅನಿತಾಳನ್ನು ತಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಕೆ ಕ್ಯಾನ್ಸರ್‌ನ ಮುಂದುವರಿದ ಹಂತದಲ್ಲಿದ್ದಾಳೆ. ಸದ್ಯ ಆಕೆ ಹಾಸಿಗೆ ಹಿಡಿದಿದ್ದು, ಇತ್ತ ಇರುವ ಒಬ್ಬಳೇ ಮಗಳು ಕೂಡ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಅಲ್ಲದೇ ಗೋಯಲ್ ತನ್ನ ಮೊಣಕಾಲುಗಳನ್ನು ತೋರಿಸಿದರು. ಅವು ಊದಿಕೊಂಡಿವೆ ಮತ್ತು ನೋವಿನಿಂದ ಕೂಡಿದೆ. ಕಾಲುಗಳನ್ನು ಮಡಚಲು ಸಾಧ್ಯವಾಗುತ್ತಿಲ್ಲ. ಮೂತ್ರ ವಿಸರ್ಜಿಸುವಾಗ ತೀವ್ರವಾದ ನೋವು ಮತ್ತು ಕೆಲವೊಮ್ಮೆ ಮೂತ್ರದ ಮೂಲಕ ರಕ್ತವು ಬರುತ್ತದೆ ಎಂದು ಗೋಯಲ್ ನ್ಯಾಯಾಲಯದ ಗಮನಕ್ಕೆ ತಂದರು.
ಆರೋಗ್ಯ ತಾಪಸಣೆಗಾಗಿ ನನ್ನನ್ನು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಆದರೆ ಆಸ್ಪತ್ರೆಗೆ ಹೋಗಿ ಹೆಚ್ಚು ಹೊತ್ತು ಸರದಿಯಲಿ ನಿಲ್ಲಲು ಆಗುತ್ತಿಲ್ಲ. ಅಷ್ಟೊಂದು ಶಕ್ತಿ ನನಗಿಲ್ಲ. ಹೀಗಾಗಿ ಪದೇ ಪದೇ ಆಸ್ಪತ್ರೆಗೆ ಹೋಗುವುದು ನನಗೆ ಬೇಸರ ಅನಿಸಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ನನ್ನನ್ನು ಜೈಲಿನಲ್ಲಿಯೇ ಸಾಯಲು ಬಿಡಿ. ಜೀವನದ ಪ್ರತಿಯೊಂದು ಭರವಸೆಯನ್ನು ಕಳೆದುಕೊಂಡಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಜೀವಂತವಾಗಿರುವುದಕ್ಕಿಂತ ಸಾಯುವುದು ಉತ್ತಮ ಎಂದು ಗೋಯಲ್ ಹೇಳಿದರು.