DAKSHINA KANNADA
ಅಡ್ಡಹೊಳೆ – ಚಲಿಸುತ್ತಿದ್ದ ಲಾರಿಯಿಂದ ಜಿಗಿದ ಕ್ಲಿನರ್ ಸಾವು

ಪುತ್ತೂರು ಫೆಬ್ರವರಿ 26: ಚಲಿಸುತ್ತಿದ್ದ ಲಾರಿಯಿಂದ ಜಿಗಿದ ಪರಿಣಾಮ ಕಾಂಕ್ರೀಟ್ ರಸ್ತೆಗೆ ಬಿದ್ದು ಕ್ಲಿನರ್ ಸಾವನಪ್ಪಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಅಡ್ಡಹೊಳೆಯಲ್ಲಿ ಫೆಬ್ರವರಿ 25ರಂದು ಮುಂಜಾನೆ ನಡೆದಿದೆ. ಮೃತರನ್ನು ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯ ಎರುವೈಕಾಡು ಗ್ರಾಮದ ನಿವಾಸಿ ಲಕ್ಷ್ಮಣ್ ಸೇಗೊಂಟವನ್ ಎಂದು ಗುರುತಿಸಲಾಗಿದೆ.
ಲಕ್ಷ್ಮಣ್ ತನ್ನೂರಿನವರೇ ಆದ ವೇಳಾಯುದಂ ರಾಜಾಗಂ ಅವರೊಂದಿಗೆ ಲಾರಿಯಲ್ಲಿ ನಿರ್ವಾಹಕನಾಗಿ ಕಳೆದ 1 ವಾರದಿಂದ ಕೆಲಸ ಮಾಡುತ್ತಿದ್ದ. ಅವರು ತಮಿಳುನಾಡಿನ ದಿಂಡಿವನಮ್ ಎಂಬಲ್ಲಿಂದ ಕಲ್ಲಂಗಡಿ ಹಣ್ಣುಗಳನ್ನು ಲೋಡ್ ಮಾಡಿಕೊಂಡು ಮಂಗಳೂರಿಗೆ ಬರುತ್ತಿದ್ದರು. ಫೆಬ್ರವರಿ 25ರ ಮಧ್ಯರಾತ್ರಿ ಲಕ್ಷ್ಮಣ್ ಸೇಗೊಂಟವನ್ ಬೀಡಿ ಸೇದಬೇಕೆಂದು ಹೇಳಿದಾಗ ಸ್ವಲ್ಪ ಮುಂದಕ್ಕೆ ತೆಗೆದುಕೊಂಡು ಹೋಗಿ ಲಾರಿ ನಿಲ್ಲಿಸುತ್ತೇನೆಂದು ಚಾಲಕ ಹೇಳಿದ್ದಾರೆ. ಇದರಿಂದ ಉದ್ವೇಗಗೊಂಡ ಲಕ್ಷ್ಮಣ್ ಲಾರಿ ಅಡ್ಡಹೊಳೆ ಸೇತುವೆ ಸಮೀಪ ತಲುಪಿದಾಗ ಲಾರಿಯ ಎಡಬದಿ ಕಿಟಕಿಯ ಮೂಲಕ ಕಾಂಕ್ರೀಟ್ ರಸ್ತೆಗೆ ಜಿಗಿದಿದ್ದಾರೆ.

ನಂತರ ಚಾಲಕ ವೇಳಾಯುದಂ ಅವರು ಲಾರಿಯನ್ನು ನಿಲ್ಲಿಸಿ ನೋಡಿದಾಗ ಲಕ್ಷ್ಮಣ್ ಎದೆಯ ಭಾಗದಲ್ಲಿ ತರಚಿದ ಗಾಯವುಂಟಾಗಿ ಸಾವನ್ನಪ್ಪಿದ್ದರು. ಈ ಬಗ್ಗೆ ಚಾಲಕ ವೇಳಾಯುದಂ ನೀಡಿರುವ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.