Connect with us

    LATEST NEWS

    ರಾಷ್ಟ್ರೀಯ ಲೋಕ್ ಅದಾಲತ್ – ಒಂದೇ ತಿಂಗಳಲ್ಲಿ ಅಪಘಾತದ ವಿಮೆ ಪರಿಹಾರ….!!

    ಉಡುಪಿ ಜುಲೈ 10: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೆಶನದ ಮೇರೆಗೆ ದಿನಾಂಕ 08-07- 2023 ರಂದು ಉಡುಪಿ, ಕುಂದಾಪುರ ಹಾಗೂ ಕಾರ್ಕಳದ ವಿವಿಧ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ್ ಅದಾಲತನ್ನು ಆಯೋಜಿಸಿ ಒಂದೇ ದಿನ ಒಟ್ಟು 32930 ಪ್ರಕರಣಗಳನ್ನು (ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ -62, ಚೆಕ್ಕು ಅಮಾನ್ಯ ಪ್ರಕರಣ-294, ಬ್ಯಾಂಕ್ / ಹಣ ವಸೂಲಾತಿ ಪ್ರಕರಣ-14, ಎಂ.ವಿ.ಸಿ ಪ್ರಕರಣ-166, ವೈವಾಹಿಕ ಪ್ರಕರಣ-5, ಸಿವಿಲ್ ಪ್ರಕರಣ-211, ಇತರೇ ಕ್ರಿಮಿನಲ್ ಪ್ರಕರಣ-3630 ಹಾಗೂ ವ್ಯಾಜ್ಯ ಪೂರ್ವ ದಾವೆ-28548) ರಾಜೀ ಮುಖಾಂತರ ಇತ್ಯರ್ಥಪಡಿಸಿ ರೂ.19,51,12,983/- ಪರಿಹಾರದ ಮೊತ್ತವನ್ನು ಘೋಷಿಸಲಾಯಿತು.


    ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಉಡುಪಿ, ಕುಂದಾಪುರ ಹಾಗೂ ಕಾರ್ಕಳ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿಮಾ ಕಂಪೆನಿಗಳು, ಬ್ಯಾಂಕ್, ಕಕ್ಷಿಗಾರರು ಹಾಗೂ ಇತರ ಸರ್ಕಾರಿ ಇಲಾಖೆಯ ಸಂಪೂರ್ಣ ಸಹಕಾರದೊಂದಿಗೆ ಲೋಕ್ ಅದಾಲತ್ ನ್ನು ಯಶಸ್ವಿಗೊಳಿಸಲಾಯಿತು.

    ಇತ್ತೀಚೆಗೆ ಉಡುಪಿ ಕಡಿಯಾಳಿ ಬಳಿ ಆದ ಅಪಘಾತಕ್ಕೆ ಸಂಬಂಧಪಟ್ಟಂತೆ ಗಾಯಗೊಂಡ ವ್ಯಕ್ತಿಗಳಿರ್ವರು ತಮಗೆ ಆದ ನಷ್ಟದ ಬಗ್ಗೆ ವಿಮಾ ಪರಿಹಾರ ಕೋರಿ ಉಡುಪಿಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ರಾಯಲ್ ಸುಂದರಂ ವಿಮಾ ಕಂಪೆನಿಯ ವಿರುದ್ಧ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಜೂನ್ 8ನೇ ತಾರೀಖಿನಂದು ನ್ಯಾಯಾಲಯದಿಂದ ವಿಮಾ ಸಂಸ್ಥೆಗೆ ನೋಟೀಸು ಜಾರಿಗೊಳಿಸಿ ಜುಲೈ 11ನೇ ತಾರೀಖಿನಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚಿಸಲಾಗಿತ್ತು. ಆದರೆ ವಿಮಾ ಸಂಸ್ಥೆ ಅತ್ಯಂತ ಕಡಿಮೆ ಅವಧಿಯಲ್ಲಿ ದಾಖಲಾತಿಗಳನ್ನು ಪರಿಶೀಲಿಸಿ, ಕೇವಲ ಒಂದು ತಿಂಗಳ ಅವಧಿಯೊಳಗೆ ಪ್ರಕರಣವನ್ನು ರಾಜೀ ಸಂಧಾನದ ಮುಖೇನ ಇತ್ಯರ್ಥಪಡಿಸಿ ರಾಜಿ ಸಂಧಾನ ಪತ್ರವನ್ನು ಲೋಕ ಅದಾಲತ್ ನಲ್ಲಿ ಸಲ್ಲಿಸಲಾಯಿತು. ಅಪಘಾತ ವಿಮಾ ಪರಿಹಾರ ಪ್ರಕರಣದಲ್ಲಿ ಇಷ್ಟೊಂದು ಕಡಿಮೆ ಅವಧಿಯಲ್ಲಿ ವಿಮಾ ಪರಿಹಾರ ಇತ್ಯರ್ಥವಾಗಿರುವುದು ಒಂದು ದಾಖಲೆ ಎಂದು ರಾಯಲ್ ಸುಂದರಂ ವಿಮಾ ಸಂಸ್ಥೆಯ ನ್ಯಾಯವಾದಿ ಎಚ್.ಆನಂದ ಮಡಿವಾಳ ಅಭಿಪ್ರಾಯಪಟ್ಟಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *