LATEST NEWS
ಸಾಲ ವಂಚನೆ ಆರೋಪ; ಅನಿಲ್ ಅಂಬಾನಿಯ ಹಲವು ಕಂಪನಿಗಳ ಮೇಲೆ ಇಡಿ ರೇಡ್

ನವದೆಹಲಿ, ಜುಲೈ 24: ಯೆಸ್ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಅನಿಲ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಗ್ರೂಪ್ಗೆ ಸೇರಿದ ಹಲವು ಕಂಪನಿಗಳ ಮೇಲೆ ದಾಳಿ ಮಾಡಿದೆ.
ವರದಿಗಳ ಪ್ರಕಾರ ಗ್ರೂಪ್ಗೆ ಸೇರಿದ 35ಕ್ಕೂ ಹೆಚ್ಚು ಸ್ಥಳಗಳು ಹಾಗು 50 ಕಂಪನಿಗಳ ಮೇಲೆ ಇಡಿ ರೇಡ್ ಮಾಡಿರುವುದು ತಿಳಿದುಬಂದಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯಾದ ಪಿಎಂಎಲ್ಎ ಆ್ಯಕ್ಟ್ ಸೆಕ್ಷನ್ 17 ಅಡಿಯಲ್ಲಿ ಇಡಿಯಿಂದ ಈ ದಾಳಿ ಆಗಿದೆ.

ಈ ವಂಚನೆ ಆರೋಪವೇನು?
ಯೆಸ್ ಬ್ಯಾಂಕ್ 2017 ಮತ್ತು 2019ರ ನಡುವೆ ರಿಲಾಯನ್ಸ್ ಗ್ರೂಪ್ಗೆ 3,000 ಕೋಟಿ ರೂ ಸಾಲ ಮಂಜೂರು ಮಾಡಿತ್ತು. ಆದರೆ, ಈ ಸಾಲದ ಹಣವನ್ನು ಗ್ರೂಪ್ನ ಇತರ ಸಂಸ್ಥೆಗಳು ಹಾಗೂ ಶೆಲ್ ಕಂಪನಿಗಳಿಗೆ (ಬೇನಾಮಿ) ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು. ಯೆಸ್ ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡಿರುವ ಸಾಧ್ಯತೆ ಇದೆ. ಆರಂಭಿಕ ತನಿಖೆಯಲ್ಲಿ ಈ ಸಂಬಂಧ ಸಾಕ್ಷ್ಯಾಧಾರಗಳೂ ಸಿಕ್ಕಿವೆ ಎಂಬುದು ಜಾರಿ ನಿರ್ದೇಶನಾಲಯ ಮಾಡುತ್ತಿರುವ ಆರೋಪ.
ಸಾಲ ಅನುಮೋದನೆ ವಿಚಾರದಲ್ಲಿ ಯೆಸ್ ಬ್ಯಾಂಕ್ ಪ್ರಕ್ರಿಯೆ ಅನುಮಾನಾಸ್ಪದವಾಗಿದೆ. ಸರಿಯಾದ ಹಣಕಾಸು ಸ್ಥಿತಿ ಇಲ್ಲದ ಕಂಪನಿಗಳು, ಸಾಮಾನ್ಯ ನಿರ್ದೇಶಕರಿರುವ ಕಂಪನಿಗಳಿಗೆ ಸಾಲ ಮಂಜೂರು ಮಾಡಲಾಗಿದೆ. ಸರಿಯಾಗಿ ಅವಲೋಕನ ಮಾಡುವ ಪ್ರಯತ್ನ ಆಗಿಲ್ಲ. ಸಾಲಕ್ಕೆ ಅನುಮೋದನೆ ಆಗುವ ಮುನ್ನವೇ ಅಥವಾ ಅದೇ ದಿನವೇ ಸಾಲದ ಹಣ ಬಿಡುಗಡೆ ಮಾಡಲಾಗಿದೆ ಎಂದು ಯೆಸ್ ಬ್ಯಾಂಕ್ನ ವ್ಯವಸ್ಥೆಯಲ್ಲಿರುವ ಲೋಪಗಳನ್ನು ಇಡಿ ಎತ್ತಿ ತೋರಿಸಿದೆ. ಇಡಿ ನೀಡಿರುವ ಮಾಹಿತಿ ಪ್ರಕಾರ ರಿಲಾಯನ್ಸ್ ಗ್ರೂಪ್ಗೆ ಸೇರಿದ 40ಕ್ಕೂ ಅಧಿಕ ಕಂಪನಿಗಳು ಹಾಗೂ 25 ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದೆ.