DAKSHINA KANNADA
ದಕ್ಷಿಣ ಕನ್ನಡದ ಎಂಟು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರೆಡಿ, ಘೋಷಣೆಯೊಂದೇ ಬಾಕಿ !
ದಕ್ಷಿಣ ಕನ್ನಡದ ಎಂಟು ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರೆಡಿ, ಘೋಷಣೆಯೊಂದೇ ಬಾಕಿ !
ಮಂಗಳೂರು, ಎಪ್ರಿಲ್ 13 : ಗೊಂದಲದ ಗೂಡಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ವರಿಷ್ಟರು ಕೊನೆಗೂ ಫೈನಲ್ ಮಾಡಲಾಗಿದೆ ಎನ್ನುವ ನಿಖರ ಮಾಹಿತಿ ಮಂಗಳೂರು ಮಿರರ್ ಗೆ ಲಭ್ಯವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಪೈಕಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಹಾಲಿ ಶಾಸಕ ಎಸ್. ಅಂಗಾರ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.
ಆದರೆ ಉಳಿದ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಹೆಚ್ಚಾದ ಹಿನ್ನಲೆಯಲ್ಲಿ ಬಿಜೆಪಿ ವರಿಷ್ಟರಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಅತ್ಯಂತ ಕ್ಲಿಷ್ಟಕರವಾಗಿತ್ತು.
ಈ ನಡುವೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನದೇ ಮೂಲದ ಮೂಲಕ ಅಭ್ಯರ್ಥಿಗಳ ಕುರಿತು ಸರ್ವೆಯನ್ನು ನಡೆಸಿದ್ದಾರೆ.
ಜೊತೆಗೆ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ವತಿಯಿಂದಲೂ ಅಭ್ಯರ್ಥಿಗಳ ಪಟ್ಟಿಯನ್ನು ವರಿಷ್ಟರಿಗೆ ನೀಡಲಾಗಿತ್ತು.
ಅಮಿತ್ ಶಾ ನಡೆಸಿದ ಸರ್ವೆ ಹಾಗೂ ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಕಳುಹಿಸಿದ ಪಟ್ಟಿಯಲ್ಲಿ ಸಮಾನತೆ ಇಲ್ಲದ ಕಾರಣ ಗೆಲುವಿನ ಅಭ್ಯರ್ಥಿಯನ್ನು ಆರಿಸುವ ನಿಟ್ಟಿನಲ್ಲಿ ಪಕ್ಷದ ವರಿಷ್ಟರು ಗೊಂದಲದಲ್ಲೂ ಸಿಲುಕಿದ್ದಾರೆ ಎನ್ನಲಾಗಿದೆ.
ಈ ನಡುವೆ ಜಾತಿ ಲೆಕ್ಕಾಚಾರವೂ ಪಕ್ಷದ ಅಭ್ಯರ್ಥಿಯನ್ನು ಆರಿಸುವ ನಿಟ್ಟಿನಲ್ಲಿ ಗಣನೆಗೆ ಬರುವ ಹಿನ್ನಲೆಯಲ್ಲಿ ಅಮಿತ್ ಶಾ ನಡೆಸಿದ ಸರ್ವೆಯಲ್ಲಿ ಹೆಚ್ಚಿನ ಜನಮತ ಗಳಿಸಿದ ಅಭ್ಯರ್ಥಿಗಳನ್ನು ಈ ಬಾರಿ ಕೈ ಬಿಟ್ಟು, ಜಾತಿ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದಲೇ ತಿಳಿದುಬಂದಿದೆ.
ಈ ಪ್ರಕಾರ ಈಗಾಗಲೇ ವರಿಷ್ಟರು ಬಾಕಿ ಉಳಿದ ಏಳು ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿದೆ ಎನ್ನುವ ನಿಖರ ಮಾಹಿತಿ ಇದೀಗ ಲಭ್ಯವಾಗಿದೆ.
ವರಿಷ್ಟರ ಕೈಯಲ್ಲಿರುವ ಪಟ್ಟಿಯ ಪ್ರಕಾರ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಸಂತೋಷ್ ಕುಮಾರ್ ರೈ ಬೊಳಿಯಾರ್, ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಕೃಷ್ಣ ಪಾಲೇಮಾರ್ , ಮುಲ್ಕಿ-ಮೂಡಬಿದ್ರೆ ಕ್ಷೇತ್ರಕ್ಕೆ ಉಮಾನಾಥ್ ಕೋಟ್ಯಾನ್, ಪುತ್ತೂರು ಕ್ಷೇತ್ರಕ್ಕೆ ಸಂಜೀವ ಮಠಂದೂರು ಹಾಗೂ ಬೆಳ್ತಂಗಡಿ ಕ್ಷೇತ್ರಕ್ಕೆ ಹರೀಶ್ ಪೂಂಜಾ ರನ್ನು ಆಯ್ಕೆ ಮಾಡಲಾಗಿದೆ.
ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದ್ದ ಕಾರಣ, ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆಯಾದ ಬಳಿಕ ಬಿಜೆಪಿ ಪಕ್ಷದಲ್ಲಿ ಯಾವ ರೀತಿಯ ಬೆಳವಣಿಗೆ ನಡೆಯಲಿದೆ ಎನ್ನುವ ಕೂತೂಹಲವೂ ಹೆಚ್ಚಾಗಿದೆ.
ಜಿಲ್ಲೆಯ ಎಂಟೂ ವಿಧಾನಸಭಾ ಕ್ಷೇತ್ರಗಳನ್ನು ಈ ಬಾರಿ ಗೆಲ್ಲಲೇ ಬೇಕೆನ್ನುವ ಹಠದಲ್ಲಿದ್ದ ಬಿಜೆಪಿ ಪಕ್ಷಕ್ಕೆ ಈ ಬಾರಿ ಆಕಾಂಕ್ಷಿಗಳೇ ಮಗ್ಗಲು ಮುಳ್ಳಾಗುವ ಸಾಧ್ಯತೆಯೂ ಹೆಚ್ಚಾಗಿದೆ.