DAKSHINA KANNADA
ರಾಯಿ: ಸಿಡಿಲಿಗೆ ಗ್ರಾ.ಪಂ.ಮಾಜಿ ಅಧ್ಯಕ್ಷರ ಮನೆ ಸಂಪೂರ್ಣ ಹಾನಿ, ಅಪಾಯದಿಂದ ಕುಟುಂಬ ಪಾರು

ಬಂಟ್ವಾಳ: ರಾಯಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ಎಂಬವರ ಮನೆಗೆ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿಗೀಡಾದ ಘಟನೆ ನಡೆದಿದೆ.
ಘಟನೆಯಲ್ಲಿ ಮನೆಯವರು ಅಪಾಯದಿಂದ ಪಾರಾಗಿದ್ದಾರೆ. ಶುಕ್ರವಾರ ರಾತ್ರಿ ದಿಢೀರನೆ ಸುರಿದ ಮಳೆಗೆ ಮೊದಲು ಭಾರೀ ಶಬ್ಧ ಸಹಿತ ಇವರ ಮನೆ ಹಿಂಬದಿ ಮರವೊಂದಕ್ಕೆ ಸಿಡಿಲು ಬಡಿದಿದೆ. ಇದೇ ವೇಳೆ ಇವರ ಮನೆ ಮತ್ತು ಸ್ನಾನಗೃಹದ ಗೋಡೆ ಕೊರೆದು ಮನೆಯೊಳಗೆ ವಿದ್ಯುತ್ ಪರಿಕರವೆಲ್ಲಾ ಸುಟ್ಟು ಕರಕಲಾಗಿದೆ. ಸ್ವತಃ ಕಣ್ಣೆದುರೇ ಫ್ಯಾನ್ ಮತ್ತಿತರ ವಿದ್ಯುತ್ ಸಾಮಾಗ್ರಿ ಸುಟ್ಟು ಪುಡಿಯಾಗಿರುವ ದೃಶ್ಯ ಕಂಡು ಮನೆಯವರು ಆಘಾತಗೊಂಡಿದ್ದಾರೆ.

ಮನೆ ಗೋಡೆ ಮತ್ತು ಹೆಂಚಿನ ಮಾಡು ಸಂಪೂರ್ಣ ಬಿರುಕು ಕಾಣಿಸಿಕೊಂಡು ಕುಸಿತದ ಭೀತಿ ಉಂಟು ಮಾಡಿದೆ. ಗ್ರಾಮ ಕರಣಿಕ ಪರೀಕ್ಷಿತ್ ಶೆಟ್ಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.