DAKSHINA KANNADA
ಸೌಜನ್ಯ ಹೆಸರಿನಲ್ಲಿ ಬೇಳೆ ಬೇಯಿಸುದನ್ನ ಸರ್ಕಾರ ನಿಲ್ಲಿಸಲಿ, ಇಲ್ಲದಿದ್ದರೆ ಸರ್ಕಾರ ಪಥನ ಆಗೋದು ನಿಶ್ಚಿತ
ಪುತ್ತೂರು, ಆಗಸ್ಟ್ 14: ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ,ಕೊಲೆ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸುವಂತೆ, ಪ್ರಕರಣವನ್ನು ಮರು ತನಿಖೆ ನಡೆಸಬೇಕೆಂದು ಆಗ್ರಹಿಸಿ ಪುತ್ತೂರು ಪರಿವಾರದಿಂದ ಬೃಹತ್ ಪ್ರತಿಭಟನೆ, ಪಾದಯಾತ್ರೆ ನಡೆಯಿತು
ಅರುಣ್ ಪುತ್ತಿಲ ನೇತೃತ್ವದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದು, ಪುತ್ತೂರಿನ ದರ್ಬೆ ವೃತ್ತದಿಂದ ಪಾದಾಯಾತ್ರೆಯ ಮೂಲಕ ತೆರಳಿದ ಕಾರ್ಯಕರ್ತರು ಸರಕಾರಿ ಬಸ್ ನಿಲ್ದಾಣದ ಬಳಿ ಸೇರಿ ಸುಮಾರು 10 ನಿಮಿಷ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ ಸೌಜನ್ಯಳ ಕೊಲೆಯಾಗಿ ಹನ್ನೊಂದು ವರ್ಷಗಳು ಕಳೆದರು ಆಕೆಯ ನೈಜ ಕೊಲೆಗಾರ ಯಾರು ಅನ್ನೋದು ಈವರೆಗೂ ಪತ್ತೆಯಾಗಿಲ್ಲ. ಆರೋಪಿ ಎಂದು ಬಂಧಿಸಲ್ಪಟ್ಟ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯವೇ ಆದೇಶ ನೀಡಿರುವಾಗ ನೈಜ ಆರೋಪಿ ಯಾರು ಅನ್ನೋದು ಪತ್ತೆಯಾಗಬೇಕು.
ಆ ಕಾರಣಕ್ಕೆ ಪ್ರಕರಣವನ್ನು ಸರಕಾರ ಕೂಡಲೇ ಮರು ತನಿಖೆ ನಡೆಸಬೇಕು. ಸರಕಾರ ಈ ವಿಚಾರದಲ್ಲಿ ಮೀನಾಮೇಷ ಎಣಿಸಿದರೆ ಸೌಜನ್ಯ ವಿಚಾರದಲ್ಲಿ ಸರಕಾರ ಪತನವೂ ಆಗಬಹುದು ಎಂದು ಎಚ್ಚರಿಸಿದರು. ಸೌಜನ್ಯ ಪರ ನ್ಯಾಯಕ್ಕಾಗಿ ನಡೆಯುತ್ತಿರುವ ಈ ಆಂದೋಲನ ಮುಂದಿನ ದಿನಗಳಲ್ಲಿ ಸಂಘರ್ಷವಾಗುವ ಮೊದಲು ಸರಕಾರ ಎಚ್ಚೆತ್ತುಕೊಳ್ಳಬೇಕೆಂದ ಅವರು ಸೌಜನ್ಯ ಪ್ರಕರಣ ನಡೆದ ಸಂದರ್ಭದಲ್ಲಿದ್ದ ಪೋಲೀಸ್ ಅಧಿಕಾರಿಗಳಾದ ಅಭಿಷೇಕ್ ಗೋಯಲ್, ಸುದರ್ಶನ್ ಮತ್ತು ಯೋಗೀಶ್ ಎನ್ನುವ ಅಧಿಕಾರಿಗಳನ್ನು ಸರಕಾರ ಎಸ್.ಐ.ಟಿ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದ ಅವರು ಇದರಿಂದ ಸೌಜನ್ಯಳ ಕೊಲೆಯ ಎಲ್ಲಾ ಮಾಹಿತಿಗಳು ಹೊರಗೆ ಬರಲಿದೆ ಎಂದರು.