DAKSHINA KANNADA
ಐತ್ತೂರು ಗ್ರಾಮದ ಕೋಕಲದಲ್ಲಿ ಆಡಿನ ಮೇಲೆ ಚಿರತೆ ದಾಳಿ…
ಕಡಬ, ಎಪ್ರಿಲ್ 26: ಕಡಬದ ಮರ್ದಾಳ ಸಮೀಪದ ಐತ್ತೂರು ಗ್ರಾಮದ ಕೋಕಲ ಎಂಬಲ್ಲಿ ಮೇಯಲು ಬಿಟ್ಟ ಆಡಿನ ಮೇಲೆ ಚಿರತೆಯೊಂದು ದಾಳಿಮಾಡಿ ಪರಾರಿಯಾದ ಘಟನೆ ಇಂದು ಸಂಜೆ ನಡೆದಿದೆ.
ಐತ್ತೂರು ಗ್ರಾಮದ ಕೋಕಲ ನಿನಾಸಿ ರಾಘವ ಪೂಜಾರಿ ಎಂಬವರು ತನ್ನ ಮೂರು ಆಡುಗಳನ್ನು ಮೇಯಲು ಬಿಟ್ಟಿದ್ದರು. ಮೇಯಲು ಬಿಟ್ಟಿದ್ದ ಆಡುಗಳನ್ನು ಸಾಯಂಕಾಲ ವಾಪಾಸು ಮನೆಗೆ ತರಲು ರಾಘವ ಅವರ ಮಗ ಧನಂಜಯ ಎಂಬವರು ತೆರಳಿದ್ದಾಗ ಚಿರತೆಯೊಂದು ಏಕಾಏಕಿ ಪೊದೆಯಿಂದ ಆಡಿನ ಮೇಲೆ ದಾಳಿಮಾಡಿ ಪಕ್ಕದ ಕಾಡಿಗೆ ಪರಾರಿಯಾಗಿದೆ.
ಮೊದಲು ನಾಯಿ ದಾಳಿ ಮಾಡಿದೆ ಎಂದು ಭಾವಿಸಿದ ಧನಂಜಯ ಅವರು ಸ್ಪಷ್ಟವಾಗಿ ಗಮನಿಸಿದಾಗ ಅದು ನಾಯಿ ಅಲ್ಲ ದೊಡ್ಡ ಗಾತ್ರದ ಚಿರತೆ ಎಂದು ತಿಳಿದು ಬಂದಿದೆ. ಇಲ್ಲೇ ಪಕ್ಕದಲ್ಲಿ ಕೆ.ಎಫ್.ಡಿ.ಸಿ ರಬ್ಬರ್ ನಿಗಮದ ರಬ್ಬರ್ ತೋಟವಿದ್ದು ಚಿರತೆ ಇಲ್ಲೇ ಅವಿತಿರಬಹುದೆಂದು ಸಂಶಯ ಪಡಲಾಗಿದೆ.
ಮಾತ್ರವಲ್ಲದೆ ಬೆಳಗ್ಗಿನ ಜಾವ ರಬ್ಬರ್ ಟಾಪಿಂಗ್ ಗೆ ಬರುವ ಕಾರ್ಮಿಕರು ಎಚ್ಚರಿಕೆ ವಹಿಸಬೇಕು ಎಂದು ಧನಂಜಯ ಅವರು ಹೇಳಿದ್ದಾರೆ. ಚಿರತೆ ದಾಳಿ ಮಾಡಿದ ವಿಷಯ ತಿಳಿದ ಸ್ಥಳೀಯ ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಈ ಹಿಂದೆ ಸುಬ್ರಹ್ಮಣ್ಯ ಸಮೀಪದ ಕೊಂಬಾರು ಎಂಬಲ್ಲಿಂದ ಅರಣ್ಯ ಅಧಿಕಾರಿಗಳ ಕೈಯಿಂದ ತಪ್ಪಿಸಿಕೊಂಡ ಚಿರತೆ ಇದಾಗಿರಬಹುದು ಎಂಬುದಾಗಿ ಗ್ರಾಮಸ್ಥರು ಹೇಳಿದ್ದಾರೆ.