DAKSHINA KANNADA
ಕರುವನ್ನ ಕೊಂದು ಮರದಲ್ಲಿ ನೇತು ಹಾಕಿದ ಚಿರತೆ…!!!
ಪುತ್ತೂರು ಅಕ್ಟೋಬರ್ 07 : ಪುತ್ತೂರಿನಲ್ಲಿ ಚಿರತೆ ಕಾಟದ ಬಗ್ಗೆ ಸುದ್ದಿಯಾಗುತ್ತಲೆ ಇದೆ. ಮನೆಯಲ್ಲಿರುವ ಸಾಕು ನಾಯಿಯನ್ನು ಚಿರತೆಗಳು ಎಳೆದುಕೊಂಡು ಹೋಗಿರುವ ವರದಿಗಳು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದೇ ಮೊದಲ ಬಾರಿಗೆ ಚಿರತೆಯು ತನ್ನ ಬೇಟೆಯನ್ನು ಮರದ ಮೇಲಿಟ್ಟು ನಾಪತ್ತೆಯಾದ ಘಟನೆ ನಡೆದಿದೆ.
ಪುತ್ತೂರು ತಾಲೂಕಿನ ಕೆಯ್ಯೂರು ಮತ್ತು ಕೊಳ್ತಿಗೆ ಗ್ರಾಮ ವ್ಯಾಪ್ತಿಯ ಕಣಿಯಾರುಮಲೆ ರಕ್ಷಿತಾರಣ್ಯದ ಅರ್ತಿಯಡ್ಕ ಎಂಬಲ್ಲಿ ರಬ್ಬರ್ ಮರವೊಂದರ ಕೊಂಬೆಯಲ್ಲಿ ಸತ್ತ ದನದ ಕರುವಿನ ಕಳೇಬರ ನೇತಾಡುತ್ತಿರುವುದು ಪತ್ತೆಯಾಗಿದ್ದು, ಇದು ಚಿರತೆಯದ್ದೇ ಕೆಲಸ ಎಂದು ಅರಣ್ಯ ಇಲಾಖೆ ಖಚಿತಪಡಿಸಿದೆ.
ಇದೀಗ ಹಳ್ಳಿಯ ಗ್ರಾಮಸ್ಥರು ಮತ್ತು ರಬ್ಬರ್ ಟ್ಯಾಪರ್‌ಗಳಲ್ಲಿ ಆತಂಕ ಮನೆ ಮಾಡಿದೆ. ಮುಂಜಾನೆ ರಬ್ಬರ್ ಟ್ಯಾಪಿಂಗ್‌ಗೆ ಹೋದ ಕಾರ್ಮಿಕರು ತೋಟದ ಮಧ್ಯದ ರಬ್ಬರ್ ಮರವೊಂದರ ಮೇಲೆ ಸತ್ತ ದನದ ಕರು ನೇತಾಡು ತ್ತಿರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಕರುವಿನ ರುಂಡವು ಮರದ ಕೊಂಬೆಯ ಮಧ್ಯೆ ಸಿಲುಕಿದ್ದು, ಕೆಳಗೆ ಬೀಳದಂತೆ ಆಧಾರವಾಗಿತ್ತು. ಸತ್ತ ಕರುವಿನ ದೇಹದ ಒಂದಷ್ಟು ಭಾಗವನ್ನು ಸೀಳಿ ಮಾಂಸ ಹೊರ ತೆಗೆದು ಚಿರತೆ ತಿಂದಿದೆ. ಉಳಿದ ಕೊಂಬೆಯಲ್ಲಿ ನೇತು ಹಾಕಿ ಪರಾರಿಯಾಗಿದೆ.