LATEST NEWS
ಜನವರಿಗೆ ಎಲ್‌ಇಡಿ ಟಿ.ವಿ, ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಬೆಲೆ ದುಬಾರಿ….!!

ನವದೆಹಲಿ ಡಿಸೆಂಬರ್ 28: ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರಿಗೆ ಈಗ ದಿನದಿಂದ ದಿನಕ್ಕೆ ಬೆಲೆ ಏರಿಕೆ ಬಿಸಿ ತಟ್ಟುತ್ತಿದ್ದು, ಒಂದೆಡೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದರೆ ಇನ್ನೊಂದೆಡೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಈಗ ಎಲ್‌ಇಡಿ ಟಿ.ವಿ., ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಬೆಲೆಯು ಜನವರಿಯಿಂದ ಸರಿಸುಮಾರು ಶೇಕಡ 10ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇವುಗಳ ಉತ್ಪಾದನೆಗೆ ಬಳಕೆಯಾಗುವ ತಾಮ್ರ, ಅಲ್ಯುಮಿನಿಯಂ, ಸ್ಟೀಲ್ ಮತ್ತು ಸಾಗಣೆ ವೆಚ್ಚಗಳಲ್ಲಿ ಏರಿಕೆಯಾಗಿದ್ದು, ಈ ಪರಿಣಾಮ ಉತ್ಪಾದನಾ ವೆಚ್ಚವೂ ಹೆಚ್ಚಿದೆ. ಇದನ್ನು ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯ ಎಂದು ಕಂಪನಿಗಳು ಹೇಳಿವೆ. ಬೆಲೆ ಹೆಚ್ಚಳ ತಡೆಯಲು ಆಗುವುದಿಲ್ಲ ಎಂದು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಕ ಕಂಪನಿಗಳಾದ ಎಲ್‌ಜಿ, ಪ್ಯಾನಾಸೋನಿಕ್ ಮತ್ತು ಥಾಮ್ಸನ್ ಹೇಳಿವೆ. ಸೋನಿ ಕಂಪನಿಯು ಬೆಲೆ ಹೆಚ್ಚಳದ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಆದರೆ, ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಸೋನಿ ನೀಡಿದೆ.

ಎಲ್‌ಜಿ, ಪ್ಯಾನಾಸೋನಿಕ್ ಮತ್ತು ಥಾಮ್ಸನ್‌ನಂಥ ಕಂಪನಿಗಳು ಜನವರಿಯಿಂದಲೇ ದರ ಏರಿಸಬಹುದು ಎನ್ನಲಾಗಿದೆ. ಇತ್ತ ಸೋನಿ ಕಂಪನಿಯು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ದರ ಏರಿಕೆಯ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಕಾದು ನೋಡುವ ತಂತ್ರವನ್ನು ಅನುಸರಿಸಿದೆ.