LATEST NEWS
ಸಾಮಾಜಿಕ ಜಾಲತಾಣದಲ್ಲಿ ವಕೀಲರ ಅವಹೇಳನ ಪೊಲೀಸರಿಂದ 2 ಫೇಸ್ ಬುಕ್ ಖಾತೆ ಬಂದ್

ಸಾಮಾಜಿಕ ಜಾಲತಾಣದಲ್ಲಿ ವಕೀಲರ ಅವಹೇಳನ ಪೊಲೀಸರಿಂದ 2 ಫೇಸ್ ಬುಕ್ ಖಾತೆ ಬಂದ್
ಮಂಗಳೂರು ಸೆಪ್ಟೆಂಬರ್ 15: ಗಿರಿಗಿಟ್ ಚಿತ್ರದ ವಿರುದ್ಧ ನ್ಯಾಯಾಲಯ ಮೆಟ್ಟಿಲೇರಿದ ನ್ಯಾಯವಾದಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಅವಹೇಳನ ಮಾಡಿದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸ್ ಇಲಾಖೆ ಪಣ ತೊಟ್ಟಿದೆ.
ವಕೀಲರ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಅವಹೇಳನ ಮಾಡಿದ ಎರಡು ಖಾತೆಗಳನ್ನು ಈಗಾಗಲೇ ಬ್ಲಾಕ್ ಮಾಡಲಾಗಿದ್ದು, ಇನ್ನಷ್ಟು ಫೇಸ್‌ಬುಕ್ ಖಾತೆಗಳ ವಿರುದ್ಧ ಕ್ರಮ ಕೈಗೊಂಡು ಆರೋಪಿಗಳನ್ನು ತಕ್ಷಣ ಬಂಧಿಸಲಾಗುವುದು ಎಂದು ಸಹಾಯಕ ಪೊಲೀಸ್ ಆಯುಕ್ತ ಭಾಸ್ಕರ್ ಸ್ಪಷ್ಟಪಡಿಸಿದ್ದಾರೆ.

ಮಂಗಳೂರಿನ ಬಂದರು ಠಾಣೆಯಲ್ಲಿ ತಮ್ಮನ್ನು ಭೇಟಿಯಾದ ವಕೀಲರ ನಿಯೋಗಕ್ಕೆ ಅವರು ಈ ಭರವಸೆ ನೀಡಿದ್ದಾರೆ. ಈಗಾಗಲೇ ಫೇಸ್‌ಬುಕ್‌ನ ಮುಂಬೈ ಅಧಿಕಾರಿಗಳನ್ನು ಸಂಪರ್ಕಿಸಲಾಗಿದ್ದು, ಟ್ರೋಲ್ ಮರ್ಲೆರ್ ಮತ್ತು ಟ್ರೋಲ್ ನಂಜೆಲೆ ಎಂಬ ಎರಡು ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಇನ್ನಷ್ಟು ಖಾತೆಗಳ ವಿವರವನ್ನು ಕೋರಲಾಗಿದೆ. ಕೆಲವು ಖಾತೆಗಳ ವಿವರ ಈಗಾಗಲೇ ಪೊಲೀಸ್ ಇಲಾಖೆಯ ಕೈ ಸೇರಿದೆ. ವೈಯಕ್ತಿಕವಾಗಿ ಕೆಲ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಭಾನುವಾರವಾದ ಕಾರಣ ನಾಳೆ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದ್ದು, ತನಿಖೆ ಮತ್ತಷ್ಟು ಚುರುಕುಗೊಳ್ಳಲಿದೆ ಎಂದು ಎಸಿಪಿ ಭಾಸ್ಕರ್ ಭರವಸೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಮತ್ತು ಅವಾಚ್ಯ ಶಬ್ದಗಳಿಂದ ಅವಹೇಳನ ಮಾಡಿ ಬಂಧಿತರಾಗಿರುವ ಆರೋಪಿಗಳ ಪರ ನ್ಯಾಯಾಲಯದಲ್ಲಿ ವಕಾಲತ್ತು ವಹಿಸುವದಿಲ್ಲ ಎಂದು ಮಂಗಳೂರು ವಕೀಲರ ಸಂಘ ಸ್ಪಷ್ಟನೆ ನೀಡಿದೆ. ಅಲ್ಲದೆ, ಜಿಲ್ಲೆಯ ಹಾಗೂ ಪಕ್ಕದ ಜಿಲ್ಲೆಯ ಇತರ ವಕೀಲರ ಸಂಘಕ್ಕೂ ಆರೋಪಿಗಳ ಪರ ವಕಾಲತ್ತು ಹಾಕದಂತೆ ಮನವಿ ಮಾಡಲಾಗುವುದು ಎಂದು ಸಂಘ ತಿಳಿಸಿದೆ.