Connect with us

LATEST NEWS

ಪ್ರೆಕ್ಷಕರನ್ನು ಹಿಡಿದಿಟ್ಟುಕೊಳ್ಳಲು ವಿಫಲವಾದ ಪುನಿತ್ ರಾಜ್ ಕುಮಾರ್ ನಿರ್ಮಾಣದ ‘ ಲಾ ‘

Film Review BY : Amruth ballal

ಮಂಗಳೂರು : ಪಿ ಆರ್ ಕೆ ಪ್ರೊಡಕ್ಷನ್ಸ್ ಬಂಡವಾಳ ಹೂಡಿ, ರಘು ಸಮರ್ಥ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಲಾ’  ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗೆದ್ದಿಲ್ಲ. ಗ್ಯಾಂಗ್ ರೇಪ್ ಸಂತ್ರಸ್ತೆ ಎಂದು ಮೊದಲಾರ್ಧದವರೆಗೂ ಹೇಳಿಕೊಂಡು ಬರುವ ಕಥಾ ನಾಯಕಿ ಮಧ್ಯಂತರದಲ್ಲಿ ಪಾತ್ರ ಬದಲಾವಣೆ ಮಾಡುತ್ತಾಳೆ. ಆದರೆ ಅದಕ್ಕೂ ಮೊದಲಿನ ಒಂದೆರಡು ದೃಶ್ಯಗಳು ಸಣ್ಣಕ್ಕೆ ಅದರ ಸುಳಿವನ್ನು ಬಿಟ್ಟು ಕೊಟ್ಟಿವೆ.


ಗ್ಯಾಂಗ್ ರೇಪ್ ಎನ್ನುವ ಅತಿ ಕ್ಲಿಷ್ಟವಾದ ಪ್ರಕರಣವನ್ನು ಕೂಡಾ ಪೊಲೀಸ್, ನರ್ಸ್ ಪಾತ್ರಗಳು ದೊಡ್ಡ ವಿಶೇಷವೇನೂ ನಡೆಯಲಿಲ್ಲವಲ್ಲ ಎಂಬ ಧೋರಣೆಯಿಂದ ಪ್ರೇಕ್ಷಕನನ್ನು ಕಳವಳಗೊಳಿಸುತ್ತಾರೆ. ಕಥೆಯಲ್ಲಿ ತಿರುವುಗಳನ್ನು ಸರಿಯಾದ  ಘಟ್ಟದಲ್ಲಿ ಪೋಣಿಸಿದ್ದಾರೆ. ಮೊದಲ ಚಿತ್ರದಲ್ಲೇ ರಾಗಿಣಿ ಪ್ರಜ್ವಲ್ ಗಮನ ಸೆಳೆಯುತ್ತಾರೆ. ಎಂದಿನಂತೆ ಅಚ್ಯುತ್ ಕುಮಾರ್ ಕ್ಲಾಸ್ ಟಾಪರ್. ಚಿತ್ರದಲ್ಲಿನ ಒಂದೇ ಒಂದು ಹಾಡು ಗುನುಗುವಂತಿದ್ದರೆ, ಹಿನ್ನೆಲೆ ಸಂಗೀತಕ್ಕೆ ವಾಸುಕಿ ವೈಭವ್ ರ ಪ್ರತಿಭೆಯ ಸಂಪೂರ್ಣ ಶ್ರದ್ಧೆ ಸಂದಾಯವಾಗಿಲ್ಲ.


ಸಾಧಾರಣ ಸಂಭಾಷಣೆ, ಹೇರಿಕೆ ಎಂದೆನಿಸುವ ಕಾಮಿಡಿ ಸ್ಪೀಡ್ ಬ್ರೇಕರ್ ಗಳಂತೆ ಬೈಸಿಕೊಳ್ಳುತ್ತವೆ. ಮಂಡ್ಯ ರಮೇಶ್ ಹಾಗೂ ಮುಖ್ಯಮಂತ್ರಿ ಚಂದ್ರು ಅವರ ಪಾತ್ರಗಳನ್ನು ಅರಗಿಸಿಕೊಳ್ಳಲು ತುಂಬಾ ಕಷ್ಟ ಆಗುತ್ತದೆ. ಕ್ಲೈಮ್ಯಾಕ್ಸ್ ಹತ್ತಿರ ಮಾತ್ರ ಜಡ್ಜ್ ಪಾತ್ರ ಗಾಂಭೀರ್ಯತೆಯನ್ನು ಉಳಿಸಿಕೊಳ್ಳಲು ತಡವರಿಸಿದ್ದು ಬಿಟ್ಟರೆ ಅದಕ್ಕೂ ಮೊದಲು ಅವರಿಂದ ಕಾಮಿಡಿ ದೃಶ್ಯಗಳನ್ನು ಮಾಡಿಸಿದ್ದು ಸರಿ ಕಾಣುವುದಿಲ್ಲ. ಕೆಲವು ಶಾಟ್ಸ್ ಮತ್ತೆ ಮತ್ತೆ ತೋರಿಸಿ ಪ್ರೇಕ್ಷಕರಿಗೆ ಎಲ್ಲಾ ಸ್ಪೂನ್ ಫೀಡ್ ಮಾಡಲು ಹೊರಟಿದ್ದಾರೆ ಹಾಗೂ ಅತಿ ಪೆದ್ದನಿಗೂ ಈ ಸಸ್ಪೆನ್ಸ್ ಥ್ರಿಲ್ಲರ್ ತಲುಪಲಿ ಎಂಬ ವಿಶೇಷ ಕಾಳಜಿ ವಹಿಸಿ ಯಾರ ತಲೆಗೂ ಜಾಸ್ತಿ ಕೆಲಸ ಕೊಡುವುದಿಲ್ಲ. ರಾತ್ರಿ ಮಾಡೋ ಲೈವ್ ವಿಡಿಯೋ ಜನರು ರಣಬಿಸಿಲಲ್ಲಿ ನೋಡಿದ್ದು, ಕ್ಲೈಮ್ಯಾಕ್ಸ್ ನಲ್ಲಿ ಗಡಿಯಾರದ ಮಂಗನಾಟ ಹೀಗೆ ಕೆಲವು ತಪ್ಪುಗಳಿಂದ ಒಂದು ಒಳ್ಳೆಯ ಥ್ರಿಲ್ಲರ್ ಆಗಬಹುದಾಗಿದ್ದ ಕಂಟೆಂಟ್ ಎಡವಿ ಬಿದ್ದಿದೆ.


ಟಿ.ಎನ್.ಎಸ್ ಗರಡಿಯಲ್ಲಿ ಪಳಗಿರುವ ನಿರ್ದೇಶಕರು ಕೋರ್ಟ್ ದೃಶ್ಯಗಳಲ್ಲಿ ಗಂಭೀರತೆಯನ್ನು ಉಳಿಸಿಕೊಳ್ಳುವುದಿಲ್ಲ. ಮಾತಿನಲ್ಲೇ ಕಟ್ಟಿಹಾಕಲು ಪ್ರಯತ್ನಿಸುವ ಶ್ಯಾಮ್ ಪ್ರಸಾದ್, ನಂದಿನಿಯ ವಾದವನ್ನು ಪರಿಣಾಮಕಾರಿಯಾಗಿ ಅಲ್ಲಗಳೆಯುತ್ತೇನೆ ಎಂದು ಹೇಳುತ್ತಾ ಕೊನೆಕ್ಷಣದ ಅನಿರೀಕ್ಷಿತ ಬದಲಾವಣೆಗೆ ಕಾರಣರಾಗುತ್ತಾರೆ.


ಇತ್ತೀಚೆಗಷ್ಟೇ ಪ್ರೈಮ್ ಎಕ್ಸ್‌ಕ್ಲೂಸಿವ್ ಆಗಿ ಬಿಡುಗಡೆಯಾದ ‘ಪೊನ್ ಮಗಳ್ ವಂದಾಳ್’ ತಮಿಳು ಚಿತ್ರದಲ್ಲಿ ಕೋರ್ಟ್ ದೃಶ್ಯಗಳು ಗಟ್ಟಿಯಾಗಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವಾಗ ಕನ್ನಡದ ಕೋರ್ಟ್ ಡ್ರಾಮಾ ಚಿತ್ರವೊಂದು ಮೊದಲ ಬಾರಿಗೆ ಅಮೆಜಾನ್ ಪ್ರೈಮ್ ನಲ್ಲಿ ಜಗತ್ತಿನಾದ್ಯಂತ  ಬಿಡುಗಡೆಗೊಂಡಿದ್ದು ಅದೆಷ್ಟೋ ಒಳ್ಳೆಯ ಕನ್ನಡ ಚಿತ್ರಗಳಿಗೆ ಹೆಬ್ಬಾಗಿಲನ್ನೇ ತೆರೆಯಬಹುದು ಎಂಬ ನಿರೀಕ್ಷೆ ಇತ್ತು. ಪ್ರೈಮ್ ಇನ್ನೂ ಹಲವು ಬ್ಯಾನರ್ ಗಳೊಂದಿಗೆ ಕೈ ಜೋಡಿಸಿ ಉತ್ತಮ ವಿಷಯಾಧಾರಿತ ಕನ್ನಡ ಚಿತ್ರಗಳಿಗೆ ಪ್ರೋತ್ಸಾಹ ಕೊಟ್ಟರೆ ಹೆಚ್ಚಿನ ಜನರಿಗೆ ತಲುಪಲು ಸಾಧ್ಯವಾಗಬಹುದು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *