DAKSHINA KANNADA
ಮಾಂಸ ತಿನ್ನುವ ತೀಟೆಗೆ ಲಂಗೂರ್ ಬೇಟೆ, ಪದ್ಮುಂಜಾ ಕಾಡಲ್ಲಿ ಹೆಚ್ಚಾಗಿದೆ ಬೇಟೆಗಾರರ ಭರಾಟೆ

ಮಾಂಸ ತಿನ್ನುವ ತೀಟೆಗೆ ಲಂಗೂರ್ ಬೇಟೆ, ಪದ್ಮುಂಜಾ ಕಾಡಲ್ಲಿ ಹೆಚ್ಚಾಗಿದೆ ಬೇಟೆಗಾರರ ಭರಾಟೆ
ಬೆಳ್ತಂಗಡಿ,ಅಕ್ಟೋಬರ್ 25: ದಕ್ಷಿಣಕನ್ನಡ ಜಿಲ್ಲೆಯ ವ್ಯಾಪ್ತಿಗೆ ಬರುವ ಅರಣ್ಯಗಳ ಒಳಗೆ ಅಕ್ರಮ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಅಕ್ರಮ ಮರಕಳ್ಳ ಸಾಗಾಟಗಾರರು, ಹಾಲುಮಡ್ಡಿ ಕಳ್ಳಸಾಗಾಟ, ಹರಳುಕಲ್ಲುಗಳ ದಂಧೆ ಜೊತೆಗೆ ಪ್ರಾಣಿಗಳ ಬೇಟೆಯೂ ನಿರಂತರವಾಗಿ ನಡೆಯುತ್ತಿದೆ. ಅದರಲ್ಲೂ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಗೆ ಬರುವ ಪದ್ಮುಂಜಾ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಅಪರೂಪದ ಮುಸುವ ( ಲಂಗೂರ್ ) ಗಳು ಇದೀಗ ಬೇಟೆಗಾರರ ದಾಳಿಗೆ ಬಲಿಯಾಗುತ್ತಿದೆ. ಆಹಾರಕ್ಕಾಗಿ ಈ ಲಂಗೂರ್ ಗಳನ್ನು ಬೇಟೆಯಾಡಿ ಕೊಲ್ಲುತ್ತಿದ್ದು, ನೂರಾರು ಸಂಖ್ಯೆಯಲ್ಲಿದ್ದ ಈ ಸಾಧು ಪ್ರಾಣಿಗಳು ಇದೀಗ ಬೆರಳೆಣಿಕೆಗೆ ಇಳಿದಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಗೆ ಬರುವ ಪದ್ಮುಂಜ ಅರಣ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬೇಟೆಗಾರರ ಹಾವಳಿ ಮಿತಿ ಮೀರುತ್ತಿದೆ. ಅರಣ್ಯದಲ್ಲಿರುವ ಪ್ರಾಣಿ, ಪಕ್ಷಿಗಳು ಈ ಬೇಟೆಗಾರರ ಹೊಟ್ಟೆ ಸೇರುತ್ತಿದೆ. ಪದ್ಮುಂಜ ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುವ ಅಪರೂಪದ ಹಾಗೂ ಅಳಿವಿನಂಚಿಗೆ ತಲುಪಿರುವ ಮುಸುವ (ಲಂಗೂರ್) ಗಳು ಇದೀಗ ಈ ಬೇಟೆಗಾರರ ಕೋವಿಯ ಗುಂಡಿಗೆ ಬಲಿಯಾಗುತ್ತಿವೆ.
ಕೃಷಿಕನಿಗೆ ಯಾವತ್ತೂ ತೊಂದರೆ ಮಾಡದ, ಸದಾ ಕಾಡಿನಲ್ಲೇ ಸಿಕ್ಕಿದ ಆಹಾರಗಳನ್ನು ತಿನ್ನುತ್ತಾ ಬದುಕುವ ಈ ಸಾಧುಪ್ರಾಣಿಗಳು ಕೇವಲ ಮಾಂಸದ ಕಾರಣಕ್ಕಾಗಿ ಕೊಲ್ಲಲಾಗುತ್ತಿದೆ. ಈ ಕಾಡಿನಲ್ಲಿ ನೂರಾರು ಸಂಖ್ಯೆಯಲ್ಲಿದ್ದ ಮುಸುವಗಳು ಇದೀಗ ಬೆರಳೆಣಿಕೆಯ ಸಂಖ್ಯೆಗೆ ತಲುಪಿವೆ. ಬೇಟೆಗಾರರನ್ನು ನಿಯಂತ್ರಿಸಬೇಕೆಂದು ಅರಣ್ಯ ಇಲಾಖೆ ಹಾಗೂ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದರೂ ಯಾರೂ ಇತ್ತ ಕಡೆ ಗಮನ ಹರಿಸುತ್ತಿಲ್ಲ ಎನ್ನುವುದು ಸ್ಥಳೀಯರ ಆರೋಪವಾಗಿದೆ.
ತನ್ನ ಹೊಟ್ಟೆ ತುಂಬಿಸುವುದಕ್ಕಾಗಿ ಕೋವಿಯ ಜೊತೆ ಕಾಡಿನೊಳಗೆ ನುಗ್ಗುವ ಬೇಟೆಗಾರರು ಮುಖ್ಯವಾಗಿ ಸಾಧು ಪ್ರಾಣಿಯಾಗಿರುವ ಈ ಮುಜುವ ಗಳನ್ನೇ ತನ್ನ ಗುರಿಯನ್ನಾಗಿಸಿದ್ದಾರೆ. ಬೇಟೆಗಾರರ ಹಾವಳಿ ಜಾಸ್ತಿಯಾದಾಗ ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದಲ್ಲಿ, ದೂರು ನೀಡಿದವರ ಹೆಸರನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳೇ ಬೇಟೆಗಾರರಿಗೆ ನೀಡುತ್ತಿದ್ದಾರೆ. ಇದರಿಂದಾಗಿ ಬೇಟೆಗಾರರು ನೇರವಾಗಿ ದೂರು ನೀಡುವವರನ್ನು ಬೆದರಿಸುವ ಕಾರ್ಯದಲ್ಲೂ ತೊಡಗಿದ್ದಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಪ್ರದೀಪ್.
ಮುಸುವ (ಲಂಗೂರ್) ಗಳು ಇತ್ತೀಚಿನ ದಿನಗಳಲ್ಲಿ ಅವನತಿಯ ಅಂಚಿನಲ್ಲಿರುವ ಪ್ರಾಣಿಯಾಗಿದೆ. ಈ ನಿಟ್ಟಿನಲ್ಲಿ ಈ ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕಾದ ಅರಣ್ಯ ಇಲಾಖೆ ಬೇಟೆಗಾರರ ಜೊತೆಗೇ ಸೇರಿಕೊಂಡಿರುವುದು ಬೇಲಿಯೇ ಹೊದ್ದು ಹೊಲ ಮೇದಂತಾಗಿದೆ.