DAKSHINA KANNADA
ದೊಡ್ಡತಪ್ಪಲು ಬಳಿ ಮತ್ತೆ ಭೂಕುಸಿತ – ಮಣ್ಣಿನಡಿ ಸಿಲುಕಿದ ವಾಹನಗಳು – ಶಿರಾಡಿ ಘಾಟ್ ಬಂದ್
ಹಾಸನ ಜುಲೈ 31: ಮಂಗಳೂರು ಬೆಂಗಳೂರು ಶಿರಾಡಿ ಘಾಟ್ ಸಂಚಾರ ಮತ್ತೆ ಬಂದ್ ಆಗಿದೆ. ಸಕಲೇಶಪುರ ತಾಲೂಕಿನ ದೊಡ್ಡತಪ್ಪಲು ಬಳಿ ಮತ್ತೆ ಭೂಕುಸಿತವಾಗಿದ್ದು, ಈ ಬಾರಿಯೂ ಹಲವು ವಾಹನಗಳು ಮಣ್ಣಿನಡಿ ಸಿಲುಕಿದೆ.
ಮಂಗಳವಾರವಷ್ಟೇ ದೊಡ್ಡತಪ್ಪಲುವಿನಲ್ಲಿ ಭೂ ಕುಸಿತ ಸಂಭವಿಸಿತ್ತು. ಇಂದು ಮತ್ತೆ ಗುಡ್ಡ ಕುಸಿದು ಕಂಟೈನರ್ ವಾಹನ ಸೇರಿದಂತೆ ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಪಲ್ಟಿಯಾದ ಕಂಟೇನರ್‌ನಲ್ಲಿ ಚಾಲಕ ಸಿಲುಕಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಗುಡ್ಡ ಕುಸಿತದಿಂದ ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು – ಮಂಗಳೂರು ಸಂಪರ್ಕ ಕಡಿತಗೊಂಡು ಸಂಚಾರ ಬಂದ್ ಆಗಿದೆ. ಗುಡ್ಡ ಜರಿತದಿಂದ ಹೆದ್ದಾರಿಯ ಎರಡೂ ಬದಿಯಲ್ಲೂ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು, ಸವಾರರು ಪರದಾಡುವಂತಾಗಿದೆ.
ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ, ದೊಡ್ಡತಪ್ಪಲು ಗ್ರಾಮದ ಬಳಿ ಗುಡ್ಡಕುಸಿತ ಉಂಟಾಗಿ, ಹೆದ್ದಾರಿ ಸಂಚಾರಕ್ಕೆ ಅಡಚಣೆಯಾಗಿರುತ್ತದೆ. ಆದ್ದರಿಂದ ಸದ್ರಿ ಮಾರ್ಗವಾಗಿ ಸಂಚರಿಸುವ ವಾಹನಗಳು ಬದಲಿ ಮಾರ್ಗವನ್ನು ಬಳಸಬೇಕು ಎಂದು ದಕ್ಷಿಣಕನ್ನಡ ಜಿಲ್ಲಾಡಳಿತ ತಿಳಿಸಿದೆ.,