DAKSHINA KANNADA
ಅವೈಜ್ಞಾನಿಕವಾಗಿ ಗುಡ್ಡ ಅಗೆತ – ಅಪಾಯದ ಸ್ಥಿತಿಯಲ್ಲಿ ಮಚ್ಚಿ ಮಲೆ ನಿವಾಸಿಗಳು…!!
ಪುತ್ತೂರು ಜುಲೈ 19: ಕಾನೂನು ಮೀರಿ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಗುಡ್ಡಗಳನ್ನು ಅಗೆದ ಪರಿಣಾಮ ಗ್ರಾಮವೊಂದರ ಸಂಪರ್ಕ ರಸ್ತೆಯೇ ಕಡಿದು ಹೋದ ಸ್ಥಿತಿ ನಿರ್ಮಾಣವಾಗಿದೆ. ಪುತ್ತೂರಿನ ಆರ್ಯಾಪು ಗ್ರಾಮಪಂಚಾಯತ್ ನ ಮಚ್ಚಿ ಮಲೆ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರು ತಮ್ಮ ಭೂಮಿಯನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ ರಸ್ತೆಯ ಪಕ್ಕದವರೆಗೂ ಮಣ್ಣು ಅಗೆದಿರುವುದು ಈ ಪರಿಸ್ಥಿತಿಗೆ ಕಾರಣವಾಗಿದೆ. ಇದೀಗ ಸಾರ್ವಜನಿಕ ರಸ್ತೆಯ ಒಂದ ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ಗುಡ್ಡದ ಮೇಲ್ಭಾಗದಲ್ಲಿರುವ ಮನೆ ಮಂದಿ ಈ ಘಟನೆಯಿಂದ ಆತಂಕಕ್ಕೂ ಒಳಗಾಗಿದ್ದಾರೆ.
ಆರ್ಯಾಪು ಗ್ರಾಮಪಂಚಾಯತ್ ನ ಮಚ್ಚಿಮಲೆಯಿಂದ ಬಲ್ನಾಡು ಸಂಪರ್ಕಿಸುವ ಕಾಂಕ್ರೀಟ್ ರಸ್ತೆ ಭಾರೀ ಮಳೆಯಿಂದಾಗಿ ಕುಸಿತಗೊಳ್ಳುವ ಭೀತಿಯಲ್ಲಿದೆ. ಈ ರಸ್ತೆಯ ಕೆಳ ಭಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ತಮ್ಮ ಜಮೀನನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ ರಸ್ತೆಯ ಪಕ್ಕದಲ್ಲೇ ಅವೈಜ್ಞಾನಿಕವಾಗಿ ಕೊರೆದ ಪರಿಣಾಮ ಇದೀಗ ರಸ್ತೆ ಕುಸಿಯುವ ಹಂತಕ್ಕೆ ತಲುಪಿದೆ. ರಸ್ತೆ ಅಡಿಭಾಗದಿಂದಲೇ ಮಣ್ಣು ಕೊರೆದ ಪರಿಣಾಮ, ಮಳೆಗೆ ಇನ್ನಷ್ಟು ಕೊರೆತ ಉಂಟಾಗಿ ರಸ್ತೆ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ.
ರಸ್ತೆಯಲ್ಲಿ ವಾಹನ ಸಂಚಾರವನ್ನು ನಿಶೇಧಿಸಲಾಗಿದ್ದು, ಬಲ್ನಾಡು ಹಾಗು ಇತರ ಊರುಗಳಿಗೆ ಸಂಪರ್ಕವೂ ಕಡಿತಗೊಂಡಿದೆ. ರಸ್ತೆಯ ಪಕ್ಕದಲ್ಲಿ ಸ್ವಲ್ಪವೂ ಜಾಗ ಬಿಡದೆ ಮಣ್ಣು ಕೊರೆದ ಪರಿಣಾಮ ಈ ಸಮಸ್ಯೆ ಎದುರಾಗಿದ್ದು, ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸ್ಥಳಿಯರಿ ಇದರಿಂದ ಮುಂದಕ್ಕೆ ತೊಂದರೆಯಾಗಲಿದೆ ಎನ್ನುವ ಸೂಚನೆಯನ್ನೂ ಜಾಗಕ್ಕೆ ಸಂಬಂಧಪಟ್ಟವರಿಗೆ ನೀಡಿದ್ದರು. ಆದರೆ ಸ್ಥಳೀಯರ ಮಾತನ್ನು ಲೆಕ್ಕಿಸದೆ ಕಾಮಗಾರಿ ನಡೆಸಿದ ಪರಿಣಾಮ ಇದೀಗ ಸ್ಥಳೀಯರಿಗೆ ರಸ್ತೆಯೇ ಇಲ್ಲದಾಗುವಂತ ಸ್ಥಿತಿ ಎದುರಾಗಿದೆ.
ಮಚ್ಚಿ ಮಲೆಯ ಮೇಲ್ಭಾಗದಲ್ಲಿ ಕೆಲವು ಮನೆಗಳಿದ್ದು, ಭೂಕುಸಿತದಿಂದ ತಮ್ಮ ಮನೆಗೂ ತೊಂದರೆಯಾಗಲಿದೆಯೇ ಎನ್ನುವ ಆತಂಕವೂ ಸ್ಥಳೀಯ ನಿವಾಸಿಗಳದ್ದಾಗಿದೆ. ಗುಡ್ಡವನ್ನು ಎಲ್ಲೆಂದರಲ್ಲಿ ಕೊರೆದ ಪರಿಣಾಮವನ್ನು ಮಚ್ಚಿಮಲೆ ನಿವಾಸಗಳು ಅನುಭವಿಸುತ್ತಿದ್ದು, ಅವೈಜ್ಞಾನಿಕವಾಗಿ ಗುಡ್ಡ ಕೊರೆದವರ ವಿರುದ್ಧ ಕ್ರಮಕ್ಕೂ ಸ್ಥಳೀಯರು ಒತ್ತಾಯಿಸಲಾರಂಭಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರ್ಯಾಪು ಗ್ರಾಮಪಂಚಾಯತ್ ಮತ್ತು ಪುತ್ತೂರು ನಗರಸಭೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನೂ ನಡೆಸಿದ್ದಾರೆ. ರಸ್ತೆಯ ಕೆಳಭಾಗದಿಂದ ನೀರಿನ ಒಸರೂ ಬರಲಾರಂಭಿಸಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ರಸ್ತೆ ಕುಸಿಯುವ ಸಾಧ್ಯತೆಯೂ ಹೆಚ್ಚಾಗಿದೆ