LATEST NEWS
ವಾಟರ್ ಬೆಡ್ ರೀತಿಯಾದ ಭೂಮಿ ಆತಂಕದಲ್ಲಿ ಗ್ರಾಮಸ್ಥರು

ವಾಟರ್ ಬೆಡ್ ರೀತಿಯಾದ ಭೂಮಿ ಆತಂಕದಲ್ಲಿ ಗ್ರಾಮಸ್ಥರು
ಮಂಗಳೂರು ಅಕ್ಟೋಬರ್ 14: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿ ಸುರಿದ ಭಾರಿ ಮಳೆ ಅನೇಕ ಅವಾಂತರಗಳನ್ನೇ ಸೃಷ್ಠಿಸಿದೆ. ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಕರಾವಳಿ ಹಲವಾರು ಪ್ರಾಕೃತಿಕ ಬದಲಾವಣೆಗಳಿಗೆ ಸಾಕ್ಷಿಯಾಗಿದೆ.
ಏಕಾಏಕಿ ಅತಿಯಾಗಿ ಸುರಿದ ಭಾರೀ ಮಳೆ ಪ್ರವಾಹವನ್ನೇ ಸೃಷ್ಟಿಸಿತು. ಭಾರೀ ಭೂಕುಸಿತ , ಜಲ ಸ್ಪೋಟದ ಪರಿಣಾಮ ಭಾರೀ ದುರಂತಗಳೇ ದಕ್ಷಿಣ ಕನ್ನಡ ಹಾಗು ಕೊಡುಗು ಜಿಲ್ಲೆಗಳಲ್ಲಿ ಘಟಿಸಿದವು. ನಂತರ ಮಳೆಗಾಲದಲ್ಲಿ ಉಕ್ಕಿ ಹರಿದ ಕರಾವಳಿಯ ನದಿಗಳು ಏಕಾಏಕಿ ಬತ್ತಲು ಆರಂಭಿಸಿವೆ. ಕರಾವಳಿಯಲ್ಲಿ ದಿನದಿಂದ ದಿನಕ್ಕೆ ನಡೆಯುತ್ತಿರುವ ಬೆಳವಣಿಗೆಗಳು ಜನರನ್ನು ಆತಂಕಿತರನ್ನಾಗಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಒಂದರಲ್ಲಿ ಭೂಮಿ ನೀರಿನಂತೆ ವರ್ತಿಸುತ್ತಿದೆ.ಇಲ್ಲಿಯ ನೆಲದ ಮೇಲೆ ನೆಗೆದರೆ ಭೂಮಿ ಕುಲುಕುತ್ತದೆ. ಅಷ್ಟು ಮೃದು ವಾಗಿದೆ ಇಲ್ಲಿಯ ಭೂಮಿ. ಗಟ್ಟಿಯಾಗಿರಬೇಕಿದ್ದ ಭೂಮಿಯ ಮೇಲ್ಪದರ ವಾಟರ್ ಬೆಡ್ ರೀತಿಯಲ್ಲಿ ವರ್ತಿಸುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ಈ ರೀತಿಯ ಪ್ರಕೃತಿ ವಿಸ್ಮಯ ನಡೆದಿದ್ದು, ಇಲ್ಲಿ ಗಟ್ಟಿಯಾಗಿ ಇರಬೇಕಾದ ಭೂ ಪ್ರದೇಶ ಸಾಫ್ಟ್ ಆಗಿ ಸ್ಪ್ರಿಂಗ್ ರೀತಿ ಅಲುಗಾಡುತ್ತಿದೆ.
ಮೂಡಬಿದ್ರೆಯ ಕಡಂದಲೆ ಗ್ರಾಮದ ಪಾಪ್ಸನ್ ಎಂಬ ಪ್ರದೇಶದಲ್ಲಿ ಭೂಮಿ ತುಂಬಾ ಮೃದುವಾಗಿದ್ದು, ವಾಟರ್ ಬೆಡ್ ರೀತಿಯಲ್ಲಿ ವರ್ತಿಸುತ್ತಿದೆ. ಇಲ್ಲಿಯ ಭೂಮಿ ಮೇಲೆ ಕುಣಿದ್ರೂ ಕುಪ್ಪಳಿಸಿದ್ರೂ ಕಾಲು ಮಾತ್ರ ಭೂಮಿಯ ಒಳಗೆ ಹೋಗುವುದೇ ಇಲ್ಲ. ಇಲ್ಲಿ ಸ್ಪ್ರಿಂಗ್ ಬೋರ್ಡ್ ಮೇಲೆ ಜಂಪ್ ಮಾಡಿದಂತೆ ಭೂಮಿ ಮೇಲೆ ಮಾಡಬಹುದು. ಭೂಮಿ ಮೇಲಿನ ವಿಸ್ಮಯ ಸ್ಥಳೀಯ ಜನರನ್ನು ದಂಗು ಬಡಿಸಿದೆ. ಇದು ಜೌಗು ಪ್ರದೇಶದಂತೆ ಕಂಡರೂ ಇಲ್ಲಿ ನೀರಿಲ್ಲ.
ಸುಂದರ ಪ್ರಾಕೃತಿಕ ಪರಿಸರ ಹೊಂದಿರುವ ಕಡಂದಲೆ ಗ್ರಾಮದ ನಿವಾಸಿ,ವಿದ್ಯಾರ್ಥಿ ಸುಮನ್ ಶೆಟ್ಟಿ ಪೋಟೋಗ್ರಾಫಿ ಯಲ್ಲಿ ಅತೀವ ಆಸಕ್ತಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಬಯಲು, ಗುಡ್ಡಗಾಡು ಪ್ರದೇಶ ಸುತ್ತುವ ಸುಮನ್ ಇತ್ತೀಚೆಗೆ ಪಾಪ್ಸನ್ ಪ್ರದೇಶಕ್ಕೆ ಬಂದಾಗ ಈ ಬೌನ್ಸಿಂಗ್ ಅಥವಾ ನೆಗೆಯುವ ಭೂಮಿ ಬೆಳಕಿಗೆ ಬಂದಿದೆ. ಇಲ್ಲಿಯ ಭೂಮಿ ಮೇಲೆ ನಡೆಯುವಾಗ ಸ್ಪ್ರಿಂಗ್ ಮೇಲೆ ನಡೆದ,ನೀರಿನ ಅಲೆ ಮೇಲೆ ನಡೆದ ಅನುಭವಾಗಿದೆ. ಇಲ್ಲಿ ನೆಗೆದರೆ ಭೂಮಿಯ ಮೇಲ್ಮೈ ಯಲ್ಲಿ ಅಲೆಗಳು ಸೃಷ್ಟಿಯಾಗುತ್ತವೆ. ಅಷ್ಟು ಮೃದುವಾಗಿದೆ ಇಲ್ಲಿಯ ಭೂಮಿ.
ಒಟ್ಟಿನಲ್ಲಿ ಮೂಡಬಿದ್ರೆಯ ಕಡಂದಲೆ ಗ್ರಾಮದಲ್ಲಿ ಪೃಕೃತಿ ವಿಸ್ಮಯ ಬೆಳಕಿಗೆ ಬಂದಿದೆ .ಆದರೆ ಇಲ್ಲಿಯ ಸ್ಠಳೀಯ ಜನ ಮಾತ್ರ ಆತಂಕಗೊಂಡಿದ್ದಾರೆ. ಭೂಮಿ ಈ ರೀತಿಯಾಗಿ ಮೃದುವಾಗಿ ಪರಿವರ್ತನೆ ಗೊಳ್ಳಲು ಭೂಗರ್ಭ ಶಾಸ್ತ್ರ ತಜ್ಞರು ಈ ಕುರಿತು ಸಂಶೋಧನೆ ನಡೆಸಿದ ಬಳಿಕವಷ್ಟೇ ಸತ್ಯಾಂಶ ಬಯಲಾಗಬೇಕಾಗಿದೆ.