DAKSHINA KANNADA
ಮೊಬೈಲ್ ಮೆಸೇಜ್ ನಂಬಿ 25 ಸಾವಿರ ಕಳೆದುಕೊಂಡ ಮಹಿಳೆ ಪ್ರಧಾನಿಗೆ ಪತ್ರ ಬರೆದಳು
ಮೊಬೈಲ್ ಮೆಸೇಜ್ ನಂಬಿ 25 ಸಾವಿರ ಕಳೆದುಕೊಂಡ ಮಹಿಳೆ ಪ್ರಧಾನಿಗೆ ಪತ್ರ ಬರೆದಳು
ಪುತ್ತೂರು ಅಗಸ್ಟ್ 12: ಮೊಬೈಲ್ ನಲ್ಲಿ ಬಂದ ನಕಲಿ ಮೆಸೇಜ್ ನಂಬಿ 25 ಸಾವಿರ ರೂಪಾಯಿ ಕಳೆದುಕೊಂಡ ಮಹಿಳೆ ತನಗಾದ ಮೋಸದ ಬಗ್ಗೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡಿರುವ ಘಟನೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬ ಸಮೀಪದ ಕೋಡಿಂಬಾಳ ನಿವಾಸಿ ನಾಗರತ್ನ ಅವರ ಮೊಬೈಲ್‌ಗೆ ಬಂದ ನಕಲಿ ಮೆಸೇಜ್‌ನ್ನು ನಂಬಿ ಸುಮಾರು 25,900 ರೂ. ಕಳೆದುಕೊಂಡಿದ್ದಾರೆ. ನಂತರ ತನಗಾದ ಮೋಸದ ಬಗ್ಗೆ ನಾಗರತ್ನ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ದೂರು ನೀಡಿದ್ದು, ಪ್ರಧಾನಿ ಕಾರ್ಯಾಲಯದಿಂದ ಕಡಬ ಠಾಣೆಗೆ ಸೂಚನೆ ಬಂದ ಮೇರೆಗೆ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಘಟನೆ ಎಪ್ರಿಲ್ ತಿಂಗಳಲ್ಲಿ ನಡೆದಿದ್ದು, ನಾಗರತ್ನ ಅವರ ಮೊಬೈಲ್ ಗೆ ಮೆಸೇಜ್ ಒಂದು ಬಂದಿದ್ದು ಅದರಲ್ಲಿ ನಿಮ್ಮ ಮೊಬೈಲ್ ನಂಬರ್‌ಗೆ ಲಕ್ಕಿ ಡ್ರಾ ಬಂದಿದ್ದು ಅದರಲ್ಲಿ ಸಫಾರಿ ಕಾರು ನಿಮಗೆ ಬಂದಿದ್ದು, ಇದನ್ನು ಪಡೆಯಲು ನೀವು ಜಾರ್ಖಂಡ್‌ನ ಬ್ಯಾಂಕ್ ಖಾತೆಗೆ 6,600 ರೂಪಾಯಿ ಪಾವತಿ ಮಾಡುವಂತೆ ಸಂದೇಶ ಬಂದಿದೆ. ಈ ವಿಚಾರವನ್ನು ಯಾರಿಗೂ ಹೇಳದೆ ಮುಚ್ಚಿಟ್ಟ ನಾಗರತ್ನ ಅವರು ಪತಿಗೂ ತಿಳಿಸದೆ ಜಾರ್ಖಂಡ್‌ನ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದಾರೆ.
ನಂತರ ಕೆಲವು ದಿನಗಳ ನಂತರ ಬಂದ ಮತ್ತೊಂದು ಮೆಸೇಜ್ ನಲ್ಲಿ ಕಾರಿನ ಬೆಲೆ 12 ಲಕ್ಷ ರೂಪಾಯಿ ಇದ್ದು, ಕಾರಿನ ಬದಲು ನಾವು ನಿಮಗೆ 12 ಲಕ್ಷ ರೂಪಾಯಿ ಹಣವನ್ನು ನೀಡುತ್ತೇವೆ ಎಂದು ತಿಳಿಸಲಾಗಿತ್ತು. ಅದಕ್ಕೆ ನೀವು 12 ಸಾವಿರ ರೂಪಾಯಿಯನ್ನು ನಮ್ಮ ಖಾತೆಗೆ ಜಮಾ ಮಾಡಿ ಎಂದು ಹೇಳಿತ್ತು. ಹೇಗೂ 12 ಲಕ್ಷ ರೂ. ಬರುತ್ತದಲ್ಲಾ, 12 ಸಾವಿರ ಕಟ್ಟಿ ಬಿಡೋಣ ಎಂದು ಪಾವತಿ ಮಾಡಿದ್ದಾರೆ.
ಅದಕ್ಕೆ ಮತ್ತೊಂದು ಮೆಸೇಜ್ ಬಂದಿದ್ದು, 12 ಲಕ್ಷ ವನ್ನು ಕಳುಹಿಸಲು 6,000 ರೂ. ಫೀಸ್ ಕಟ್ಟಿ ಎಂದು ಹೇಳಲಾಗಿತ್ತು. ಅದಕ್ಕೂ ಸೈ ಎಂದ ನಾಗರತ್ನ ಅವರು ಅಷ್ಟೂ ದುಡ್ಡನ್ನು ಪಾವತಿಸಿದ್ದಾರೆ. ಅಷ್ಟರಲ್ಲಿ 23,900 ರೂ. ಪಾವತಿಸಿಯಾಗಿತ್ತು. 12 ಲಕ್ಷ ದಾಸೆಯಲ್ಲಿ ಈ ವಿಚಾರವನ್ನು ಮುಚ್ಚಿಟ್ಟು ವ್ಯವಹಾರ ನಡೆಸುತ್ತಿದ್ದ ನಾಗರತ್ನ ಅವರಿಗೆ ಕೊನೆಗೆ ತಾನು ಮೋಸ ಹೋಗುತ್ತಿರುವುದು ಅರಿವಿಗೆ ಬಂದಿದೆ.
ಇಷ್ಟೆಲ್ಲ ನಡೆದ ಬಳಿಕ ಕಳೆದೆರಡು ದಿನಗಳ ಹಿಂದೆ ಪ್ರಧಾನಿಯವರಿಗೆ ದೂರು ನೀಡಿದ್ದರು. ಪ್ರಧಾನಿ ಕಾರ್ಯಾಲಯದಿಂದ ಈ ಕುರಿತು ತನಿಖೆ ನಡೆಸುವಂತೆ ಕಡಬ ಠಾಣೆಗೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಕಡಬ ಠಾಣೆಯಲ್ಲಿ ಮೋಸ ಪ್ರಕರಣ ದಾಖಲಿಸಿಲಾಗಿದೆ.