ಕುಂದಾಪುರ ಜುಲೈ 31: ಕುಂದಾಪುರದ ಹೋಲಿ ರೋಸರಿ ಚರ್ಚ್ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ನಡೆದ ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಮ್ ಶಂಕರ್ ಅವರು ಘಟನೆಯ ಸಂಪೂರ್ಣ ವಿವರಗಳನ್ನು ನೀಡಿದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಎಸ್ಪಿ ಹರಿರಾಮ್ ಶಂಕರ್, “ಗುರುವಾರ ರಾತ್ರಿ ಸುಮಾರು 11:45 ರಿಂದ ಮುಂಜಾನೆಯವರೆಗೆ ಕುಂದಾಪುರ ಮೂಲದ ಡೆರಿಕ್ ಹಾಗೂ ಬಾರ್ಕೂರು ಮೂಲದ ಐವನ್ ನಡುವೆ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಮೊಬೈಲ್ ಫೋನ್ನಲ್ಲಿ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ‘ಧೈರ್ಯವಿದ್ದರೆ ಕುಂದಾಪುರಕ್ಕೆ ಬಾ, ಇಲ್ಲೇ ಸೆಟಲ್ ಮಾಡೋಣ’ ಎಂದು ಡೆರಿಕ್, ಐವಾನ್ಗೆ ಸವಾಲು ಹಾಕಿದ್ದನು. ಈ ಚಾಲೆಂಜ್ ಸ್ವೀಕರಿಸಿದ ಐವನ್ ತಮ್ಮ ಕಾರಿನಲ್ಲಿ ಆಗಮಿಸಿ ಕುಂದಾಪುರದ ಹೋಲಿ ರೋಸರಿ ಚರ್ಚ್ ಎದುರು ನಿಲ್ಲಿಸಿದ್ದರು,” ಎಂದರು.

“ಐವನ್ ಕಾರಿನಿಂದ ಕೆಳಗಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತನ್ನ ಕಾರಿನಲ್ಲಿ ಬಂದಿಳಿದ ಆರೋಪಿ ಡೆರಿಕ್, ಏಕಾಏಕಿ ಪಿಸ್ತೂಲ್ ತೆಗೆದು ಐವನ್ ಅವರ ಸೊಂಟದ ಕೆಳಭಾಗಕ್ಕೆ ಗುಂಡು ಹಾರಿಸಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಐವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಡೆರಿಕ್ ಸ್ಥಳದಿಂದ ಪರಾರಿಯಾಗಿದ್ದಾನೆ,” ಎಂದು ಎಸ್ಪಿ ತಿಳಿಸಿದರು.
ಘಟನೆ ಸಂಬಂಧ ಕುಂದಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೈಂ ಸ್ಪಾಟ್ಗೆ ಸೀನ್ ಆಫ್ ಕ್ರೈಮ್ (SOCO) ಅಧಿಕಾರಿಗಳು ಹಾಗೂ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮಣಿಪಾಲದ ಫೊರೆನ್ಸಿಕ್ ವಿಭಾಗಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪರಾರಿಯಾಗಿರುವ ಆರೋಪಿ ಡೆರಿಕ್ ಬಂಧನಕ್ಕೆ 3 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಎಸ್ಪಿ ಹರಿರಾಮ್ ಶಂಕರ್ ಸ್ಪಷ್ಟಪಡಿಸಿದ್ದಾರೆ.