DAKSHINA KANNADA
ಕುಂಬಳೆ -ನಾಪತ್ತೆಯಾಗಿದ್ದ 42ರ ಅಟೋ ಅಂಕಲ್ ಮತ್ತು 15ರ ಹರೆಯದ ವಿಧ್ಯಾರ್ಥಿನಿ ಕಾಡಿನಲ್ಲಿ ಶ*ವವಾಗಿ ಪತ್ತೆ

ಕುಂಬಳೆ ಮಾರ್ಚ್ 10: ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ 15ರ ಹರೆಯದ ಬಾಲಕಿ ಮತ್ತು 42ರ ರಿಕ್ಷಾಚಾಲಕನ ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಕುಡಾಲುಮೇರ್ಕಳ ಗ್ರಾಮದ ಮಂಡೆಕಾಪುವಿನ ಕಾಡಿನಲ್ಲಿ ಪತ್ತೆಯಾಗಿದೆ.

ಮಂಡೆಕಾಪುವಿನ ರಿಕ್ಷಾ ಚಾಲಕ ಪ್ರದೀಪ್ (42) ಮತ್ತು ಮನೆಪಕ್ಕದ 15ರ ಹರೆಯದ ಹೈಸ್ಕೂಲು ವಿದ್ಯಾರ್ಥಿನಿ ಮನೆಯಿಂದ ಪರಾರಿಯಾಗಿದ್ದರು. ಮರುದಿನ ಬಾಲಕಿಯ ಮನೆಯವರು ಕುಂಬಳೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ಸಲ್ಲಿಸಿದ್ದರು. ಪೊಲೀಸರು ವಿವಿಧೆಡೆ ಹುಡುಕಾಡಿದರೂ ಆಕೆಯನ್ನು ಪತ್ತೆ ಹಚ್ಚಲಾಗಿಲ್ಲ. ಈ ನಡುವೆ ಇವರಿಬ್ಬರ ಮೊಬೈಲ್‌ಗಳು ಕೂಡ ಸ್ವಿಚ್ ಆಫ್ ಆಗಿದ್ದವು. ಬಳಿಕ ಬಾಲಕಿಯ ಮನೆಯವರು ಹೈಕೋರ್ಟಿನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಮತ್ತೆ ಸಕ್ರಿಯರಾದ ಪೊಲೀಸರು ವಿಶೇಷ ತಂಡ ರಚಿಸಿ ಡ್ರೋನ್ ಬಳಸಿ ಸ್ಥಳೀಯರ ಸಹಕಾರದೊಂದಿಗೆ ಹುಡುಕಾಡುತ್ತಿದ್ದಾಗ ಇಬ್ಬರೂ ಒಂದೇ ಮರದಲ್ಲಿ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ.

ಪ್ರದೀಪ್ ಆಗಾಗ ಬಾಲಕಿಯ ಮನೆಗೆ ತೆರಳುತ್ತಿರುವುದಲ್ಲದೆ ಕೆಲವು ಬಾರಿ ಆಕೆಯನ್ನು ತನ್ನ ರಿಕ್ಷಾದಲ್ಲಿ ಶಾಲೆಗೆ ಕರೆದೊಯ್ಯುತ್ತಿದ್ದನಂತೆ. ಪರಸ್ಪರ ಸಲುಗೆಯಿಂದಿದ್ದ ಇಬ್ಬರೂ ಮುಂದೆ ವಿವಾಹ ಆಲೋಚನೆಯಲ್ಲಿದ್ದು, ಇದಕ್ಕೆ ಬಾಲಕಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಲಾಗಿದೆ. ಶವ ಪತ್ತೆಯಾದ ಸ್ಥಳದಲ್ಲಿ ಎರಡು ಮೊಬೈಲ್ ಫೋನ್‌ಗಳು ಮತ್ತು ಒಂದು ಕತ್ತಿ ಪತ್ತೆಯಾಗಿದೆ.